ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ವೈದ್ಯ ದಂಪತಿಗೆ ಗೌರವ ಪುರಸ್ಕಾರ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗೆ ಗೌರವ ಪುರಸ್ಕಾರ ನೀಡಲಾಗುವುದು.
ಜೂ. 30ರಂದು ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಅಪರಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ಕುಂದಾಪುರ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆ ಮುಖ್ಯಸ್ಥ ಎನ್. ಭಾಸ್ಕರ ಆಚಾರ್ಯ ಮತ್ತು ಡಾ. ಸಬಿತಾ ಆಚಾರ್ಯ ಅವರನ್ನು ಗೌರವಿಸಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಪ್ರತಿಭಾ ಸಂಪನ್ನ ವೈದ್ಯ
ಪ್ರತಿಭಾ ಸಂಪನ್ನ ವೈದ್ಯರಾಗಿರುವ ಡಾ. ಎನ್. ಭಾಸ್ಕರ ಆಚಾರ್ಯ 1979ರಿಂದ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ.
ಸಮಾಜ ಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಕೋಟೇಶ್ವರ ರೋಟರಿ ಅಧ್ಯಕ್ಷರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಅವರು, ಪಲಿಮಾರು ಮಠದ ವಿಶ್ವ ಸಂಜೀವಿನಿ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಬಡಜನರಿಗೆ ಆರೋಗ್ಯದ ಸೇವೆ ನೀಡುತ್ತಿದ್ದಾರೆ.
ಸಾಹಿತ್ಯ ಪರಿಚಾರಿಕ
ಆರ್ಚಿ ಎಂಬ ಕಾವ್ಯನಾಮದಲ್ಲಿ 4 ಕಾದಂಬರಿಗಳು, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಆರೋಗ್ಯ ಮತ್ತು ವಿವಿಧ ವಿಚಾರಗಳ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ.
1980ರಲ್ಲಿ ಎನ್.ಆರ್.ಎ.ಎಮ್.ಎಚ್ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ 150 ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ ಸಾಹಿತ್ಯ ಆರಾಧಕ.
2011ರಿಂದ ನಿರಂತರವಾಗಿ ದ್ವಿಭಾಷೆಯಲ್ಲಿ ಸ್ಥಿತಿಗತಿ ತ್ರೈಮಾಸಿಕ ಹೊರತರುತ್ತಿರುವುದು ಅಭಿನಂದನೀಯ.
ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಹೆಸರಿನಲ್ಲಿ ಚಡಗ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಿ, ಕಳೆದ 7 ವರ್ಷದಿಂದ ವಾರ್ಷಿಕವಾಗಿ ಉತ್ತಮ ಕಾದಂಬರಿ ಗುರುತಿಸಿ ಪ್ರಶಸ್ತಿ ನೀಡುವ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ.
ಅವರ ಸಾಹಿತ್ಯ ಸೇವೆಗಾಗಿ ಗೋರೂರು ಪ್ರತಿಷ್ಠಾನದ ಗೋರೂರು ಪ್ರಶಸ್ತಿ, ದಕ್ಷಿಣ ಕನ್ನಡಿಗರ ಸಂಘ ನೀಡಿದ ಪರಶುರಾಮ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಪತಿಗೆ ತಕ್ಕ ಸತಿ
ತಮ್ಮ ಸಾಹಿತ್ಯ ಸಮಾಜಸೇವೆ ಹಾಗೂ ವೈದ್ಯಕೀಯ ಸೇವೆಗೆ ಪತ್ನಿ ಡಾ. ಸಬಿತಾ ಆಚಾರ್ಯ ಸಾಥ್ ನೀಡುತ್ತಿದ್ದಾರೆ