Monday, July 4, 2022
Home ಲೋಕಾಭಿರಾಮ ಕ್ಲಿಷ್ಟಕರ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಮಣಿಪಾಲ ಕೆಎಂಸಿ ಕ್ಯಾನ್ಸರ್ ಆಸ್ಪತ್ರೆ

ಕ್ಲಿಷ್ಟಕರ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಮಣಿಪಾಲ ಕೆಎಂಸಿ ಕ್ಯಾನ್ಸರ್ ಆಸ್ಪತ್ರೆ

ಕ್ಲಿಷ್ಟಕರ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಮಣಿಪಾಲ ಕೆಎಂಸಿ ಕ್ಯಾನ್ಸರ್ ಆಸ್ಪತ್ರೆ

ಉಡುಪಿ, ಜ. 2 (ಸುದ್ದಿಕಿರಣ ವಾರ್ತೆ): ಕ್ಲಿಷ್ಟಕರ ಹಾಗೂ ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ (ಕೆಎಂಸಿ) ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ, ಕರಾವಳಿ ಭಾಗದ ಪ್ರಥಮ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಘಟಕ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯ ಶಸ್ತ್ರಚಿಕಿತ್ಸಕ ಡಾ. ನವೀನ ಕುಮಾರ್ ಹೇಳಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ರೀತಿಯ ಶಸ್ತ್ರಚಿಕಿತ್ಸೆ ಭಾರತದ ಕೆಲವೇ ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ ಎಂದರು.

ಯಶಸ್ವಿ ವಿಂಡ್ ಪೈಪ್ ಶಸ್ತ್ರಚಿಕಿತ್ಸೆ
ಶ್ವಾಸನಾಳದ (ವಿಂಡ್ ಪೈಪ್)ದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟ ಮತ್ತು ಸಂಕೀರ್ಣ ಶಸ್ತ್ತ್ರಚಿಕಿತ್ಸೆಗಳಲ್ಲೊಂದಾಗಿದ್ದು, ಕ್ಯಾನ್ಸರ್ ಗಡ್ಡೆ ಜೊತೆಗೆ ಶ್ವಾಸನಾಳದ ಭಾಗ ತೆಗೆದುಹಾಕಲಾಗುತ್ತದೆ. ಉಳಿದ ಶ್ವಾಸನಾಳವನ್ನು ಕೆಳಗಿನ ಭಾಗ ಅಥವಾ ಶಾಖೆ (ಮುಖ್ಯ ಬ್ರಾಂಕಸ್)ಗಳಿಗೆ ಸಂಪರ್ಕಿಸಲಾಗುತ್ತದೆ. ಶ್ವಾಸನಾಳದ ಕ್ಯಾನ್ಸರ್, ಶ್ವಾಸನಾಳವನ್ನು ಮುಚ್ಚುವ ಮೂಲಕ ಉಸಿರಾಟದ ತೊಂದರೆಗೂ ಕಾರಣವಾಗುತ್ತದೆ. ಈ ಶಸ್ತ್ರಚಿಕಿತ್ಸೆ, ರೋಗಿಯ ಜೀವ ಉಳಿಸುವ ಮತ್ತು ಕ್ಯಾನ್ಸರ್ ಗುಣಪಡಿಸುವ ವಿಧಾನವಾಗಿದೆ.

ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಈಚೆಗೆ ತಮ್ಮ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ 70 ವರ್ಷದ ರೋಗಿ ಸೇರಿದಂತೆ, 4 ಕ್ಯಾನ್ಸರ್ ಪೀಡಿತರಿಗೆ ಪ್ರಮುಖ ಟ್ರಾಕಿಯೊಬ್ರಾಂಕಿಯಲ್ (ಶ್ವಾಸನಾಳ) ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಸ್ತುತ ಆ ರೋಗಿ 9 ತಿಂಗಳಿಂದ ಆರೋಗ್ಯವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಭಾರೀ ಗಾತ್ರದ ಕ್ಯಾನ್ಸರ್ ಗಡ್ಡೆ
ಈಚೆಗೆ ರೋಗಿಯೋರ್ವರ ಎದೆಯೊಳಗಿನ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗಡ್ಡೆಯನ್ನು 2 ಪ್ರಮುಖ ಶಸ್ತ್ರಚಿಕಿತ್ಸೆ ಮೂಲಕ ಬೇಧಿಸಲಾಯಿತು. ಕ್ಯಾನ್ಸರ್ ಗಡ್ಡೆಯಿಂದ ಹೃದಯ, ಪ್ರಮುಖ ರಕ್ತನಾಳಗಳು, ಶ್ವಾಸಕೋಶ ಮತ್ತು ಶ್ವಾಸನಾಳವು ಸಂಕುಚಿತವಾಗಿದ್ದವು. ಅದರಲ್ಲಿ 15ರ ಹರೆಯದ ಬಾಲಕನಿಗೆ 3 ಕೆಜಿಯಷ್ಟು ತೂಕದ ಗಡ್ಡೆ ಇಡೀ ಎದೆಯ ಮೂಳೆ (ಸ್ಟರ್ನಮ್) ಮತ್ತು ಎದೆಯ ಎಡಭಾಗವನ್ನು ಒಳಗೊಂಡಿತ್ತು. 10 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣ ಗಡ್ಡೆಯನ್ನು ತೆಗೆದುಹಾಕಲಾಯಿತು ಮತ್ತು ಎದೆಯ ಮೂಳೆಯನ್ನು ಕೃತಕ ಮೂಳೆಯೊಂದಿಗೆ ಪುನರ್ ನಿರ್ಮಿಸಲಾಯಿತು. ಪ್ರಸ್ತುತ ಈತ ಕಳೆದ 5 ತಿಂಗಳಿಂದ ನಿಯಮಿತವಾಗಿ ವೈದ್ಯರನ್ನು ಸಂದರ್ಶಿಸುತ್ತಿದ್ದು, ಆರೋಗ್ಯವಾಗಿದ್ದಾನೆ.

15 ವರ್ಷದ ಮತ್ತೊಬ್ಬ ಬಾಲಕಿಗೆ ಕುತ್ತಿಗೆಯನ್ನೊಳಗೊಂಡ ದೊಡ್ಡ ರಕ್ತಸ್ರಾವದ ಗಡ್ಡೆ ತೆಗೆದುಹಾಕುವ ಶಸ್ತ್ರಚಿಕಿತ್ಸೆ ಮಾಡಲಾಯಿತು. 14 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಮೂಲಕ 5 ಕೆಜಿ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು ಮತ್ತು ಪ್ಲಾಸ್ಟಿಕ್ ಸರ್ಜರಿಯಿಂದ ಕುತ್ತಿಗೆಯನ್ನು ಪುನರ್ ನಿರ್ಮಿಸಲಾಯಿತು. ಪ್ರಸ್ತುತ ಆಕೆಯೂ ಆರೋಗ್ಯವಾಗಿದ್ದಾಳೆ ಎಂದು ಡಾ. ನವೀನಕುಮಾರ್ ತಿಳಿಸಿದರು.

ಅನ್ನನಾಳ ಕ್ಯಾನ್ಸರ್ ಗೆ ಚಿಕಿತ್ಸೆ
ಥೋರಾಕೋಸ್ಕೋಪಿಕ್ ಮತ್ತು ಲ್ಯಾಪರೊಸ್ಕೋಪಿಕ್ (ಕೀಹೋಲ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ನಿರಂತರವಾಗಿ ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳ, ಹೊಟ್ಟೆ, ದೊಡ್ಡ ಕರುಳು ಮತ್ತು ಕರುಳಿನ ಕೊನೆಯ ಭಾಗ, ಗರ್ಭಾಶಯ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಗಾಗಿ ನಡೆಸಲಾಗುತ್ತಿದೆ. ಈಚೆಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಏಕ ಗಾಯದ ಕೀಹೋಲ್ ಶ್ವಾಸಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದೆ. ಹಿಂದೊಮ್ಮೆ ಜಠರದ ಶಸ್ತ್ರಚಿಕಿತ್ಸೆಗೊಳಗಾಗಿದ್ದ, 25 ವರ್ಷದ ಅನ್ನನಾಳ ಕ್ಯಾನ್ಸರ್ ಪೀಡಿತರಿಗೆ ಕೀಹೋಲ್ ಸಂಕೀರ್ಣ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿ, ಅನ್ನನಾಳವನ್ನು ಕರುಳನ್ನು ಬಳಸಿ ಪುನರ್ ನಿರ್ಮಿಸಲಾಯಿತು.

ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಹೈಪರ್ ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ ವಿಧಾನದೊಂದಿಗೆ 4ನೇ ಹಂತದ ಜಠರ, ದೊಡ್ಡ ಕರುಳು ಮತ್ತು ಕರುಳಿನ ಕೊನೆಯ ಭಾಗ ಮತ್ತು ಅಂಡಾಶಯದ ಕ್ಯಾನ್ಸರ್ ಗೆ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸುತ್ತಿದೆ ಎಂದರು.

ಸಂಕೀರ್ಣ ಶಸ್ತ್ರಚಿಕಿತ್ಸೆ
ಸಂಕೀರ್ಣವಾದ ಕಾಲು ಉಳಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮೂಳೆಯ ಕ್ಯಾನ್ಸರ್ ಗೆ ನಡೆಸುತ್ತಿದ್ದು, 3 ವರ್ಷದ ಬಾಲಕಿಗೆ ತೊಡೆಯ ಮೂಳೆಯ ಕ್ಯಾನ್ಸರ್ ಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂಳೆಯ ಕ್ಯಾನ್ಸರ್ ಭಾಗವನ್ನು ತೆಗೆದುಹಾಕಿ ಹೆಚ್ಚಿನ ಪ್ರಮಾಣದ ರೇಡಿಯೊಥೆರಪಿ (ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೊಥೆರಪಿ)ಗೊಳಪಡಿಸಿ ರೋಗಿಗೆ ಮರುಜೋಡಣೆ ಮಾಡಲಾಗಿದೆ.

50 ವರ್ಷದ ಮಹಿಳೆಯೊಬ್ಬರಿಗೆ ಸ್ಯಾಕ್ರೊ- ಇಲಿಯಾಕ್ ಜಂಟಿ (ಬೆನ್ನು ಮತ್ತು ತೊಡೆಯೊಂದಿಗೆ ಸೇರಿಕೊಳ್ಳುವುದು) ಒಳಗೊಂಡ ಶ್ರೋಣಿಯ ಮೂಳೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಮುಖ್ಯ ಸ್ಯಾಕ್ರೊ- ಇಲಿಯಾಕ್ ಜಂಟಿ (ಆಂತರಿಕ ಹೆಮಿಪೆಲ್ವೆಕ್ಟಮಿ ಟೈಪ್ 4) ಜೊತೆಗೆ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು.

ಈ ಎಲ್ಲಾ ಶಸ್ತ್ರಚಿಕಿತ್ಸೆಯಲ್ಲಿ ಈಗಾಗಲೇ ಮುಂಬೈನ ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಪಡೆದ ಆಸ್ಪತ್ರೆಯ ನುರಿತ ವೈದ್ಯರಾದ ಡಾ. ನವಾಜ್ ಉಸ್ಮಾನ್, ಡಾ. ಕೇಶವ ರಾಜನ್ ಮತ್ತು ಡಾ. ಪ್ರೀತಿ ಶೆಟ್ಟಿ ಸಹಕರಿಸಿದ್ದಾರೆ ಎಂದರು.

ಮಣಿಪಾಲ ಸಮಗ್ರ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್. ಸಾಲಿನ್ಸ್, ಗುಣಮಟ್ಟದ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ದಾದಿಯರು ಮತ್ತು ಆಸ್ಪತ್ರೆಯ ಸಮರ್ಥ ಆಡಳಿತ ತಂಡದಿಂದ ಈ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿದೆ ಎಂದರು.

ಕ್ಲಿಷ್ಟಕರ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವ ನುರಿತ ಮತ್ತು ತಜ್ಞ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಂಡವನ್ನು ಉಪವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ ಅಭಿನಂದಿಸಿ. ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಹೊಂದಿದ ತಂಡ ನಮ್ಮಲ್ಲಿರುವುದರಿಂದ ಇಂಥ ಗುಣಮಟ್ಟದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿದೆ ಎಂದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ಯಾನ್ಸರ್ ಕೇಂದ್ರಗಳಿಗೆ ಸಮಾನವಾದ ಎಲ್ಲಾ ಪ್ರಮುಖ ಮತ್ತು ಅತಿ ಕ್ಲಿಷ್ಟಕರ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು ಕರಾವಳಿ ಮತ್ತು ಮಧ್ಯ ಕರ್ನಾಟಕದ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ ಎಂದರು.

ಡಾ. ಕಾರ್ತಿಕ್ ಉಡುಪ, ಡಾ, ಸುಮಿತ್ ಮಾಲಾಪುರೆ, ಡಾ. ವಾಸುದೇವ ಭಟ್, ಡಾ. ನವಾಜ್ ಉಸ್ಮಾನ್, ಡಾ. ಕೇಶವರಾಜನ್, ಅಕೌಂಟ್ಸ್ ವಿಭಾಗದ ಸುಧಾಕರ ಪ್ರಭು ಇದ್ದರು.

ಆಸ್ಪತ್ರೆಯ ಮಾರುಕಟ್ಟೆ ಉಪ ವ್ಯವಸ್ಥಾಪಕ, ಯಕ್ಷಗಾನ ಕಲಾವಿದ ಮೋಹನ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಕೃಷ್ಣಪ್ರಸಾದ ಭಾಗವತ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!