Wednesday, August 10, 2022
Home ಲೋಕಾಭಿರಾಮ ಆರೋಗ್ಯ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣೆಗೆ ಚಾಲನೆ

ಮಣಿಪಾಲ ಆರೋಗ್ಯ ಕಾರ್ಡ್ ನೋಂದಣೆಗೆ ಚಾಲನೆ

ಸುದ್ದಿಕಿರಣ ವರದಿ
ಶನಿವಾರ, ಜೂನ್ 4

ಮಣಿಪಾಲ ಆರೋಗ್ಯ ಕಾರ್ಡ್ ನೋಂದಣೆಗೆ ಚಾಲನೆ
ಮಣಿಪಾಲ: ಪ್ರಸಕ್ತ ಸಾಲಿನ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿಗೆ ಶಾಸಕ ಕೆ. ರಘುಪತಿ ಭಟ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ) ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಹೊರ ಜಿಲ್ಲೆಗಳಿಂದ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ.

ಕಳೆದ 21 ವರ್ಷಗಳಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯಡಿ ಲಕ್ಷಾಂತರ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ದೊರೆತಿದೆ. ಆಸ್ಪತ್ರೆ ಕಾರ್ಯ ನಿರಂತರವಾಗಿರಲಿ ಎಂದು ಹಾರೈಸಿದರು.

ಮಿಸ್ ಕಾಲ್ ಮೂಲಕ ಮಾಹಿತಿ
ಮಾಹೆ ಉಪ ಕುಲಪತಿ ಡಾ. ಎಂ.ಡಿ. ವೆಂಕಟೇಶ್, 2000ನೇ ಇಸವಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗಾಗಿ ಆರಂಭಿಸಿದ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆ ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ.

ಕೇರಳ, ಗೋವಾ ಸೇರಿದಂತೆ ನೆರೆ ರಾಜ್ಯಗಳ ರೋಗಿಗಳಿಗೂ ಕಾರ್ಡ್ ನ ಲಾಭ ದೊರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ನೋಂದಣಿ ಹೆಚ್ಚಾಗಿದೆ. ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಅಥವಾ ಆರೋಗ್ಯ ಎಂದು ವಾಟ್ಸ್ ಆಪ್ ಸಂದೇಶ ಕಳುಹಿಸುವ ಮೂಲಕ ಆರೋಗ್ಯ ಕಾರ್ಡ್ ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಸೌಲಭ್ಯವನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗಿದೆ ಎಂದರು.

ರಿಯಾಯಿತಿ ಸೌಲಭ್ಯ
ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, 21 ವರ್ಷದಿಂದ ಸಾಮಾಜಿಕ ಕಾಳಜಿಯೊಂದಿಗೆ ರಿಯಾಯಿತಿ ದರದಲ್ಲಿ ಲಕ್ಷಾಂತರ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೆಎಂಸಿ ಒದಗಿಸುತ್ತಿದೆ. ಕಾರ್ಡ್ ಖರೀದಿಸಲು ವ್ಯಯಿಸುವ ಹಣ ಕೇವಲ ಎರಡು ಅಥವಾ ಮೂರು ಬಾರಿ ಆಸ್ಪತ್ರೆಯಲ್ಲಿ ಕಾರ್ಡ್ ಬಳಸುವುದರಿಂದ ರಿಯಾಯಿತಿ ರೂಪದಲ್ಲಿ ಪಡೆಯಬಹುದು ಎಂದರು.

ಆರೋಗ್ಯ ಕಾರ್ಡ್ ಫಲಾನುಭವಿಗಳು ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇ. 50 ರಿಯಾಯಿತಿ, ಹೊರರೋಗಿ ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ. 30, ರೇಡಿಯಾಲಜಿ ಪರೀಕ್ಷೆಯಲ್ಲಿ ಶೇ. 20, ಸಿಟಿ, ಎಂಆರ್.ಐ, ಅಲ್ಟ್ರಾಸೌಂಡ್, ಹೊರರೋಗಿ ವಿಭಾಗ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20, ಹೊರರೋಗಿ ಡಯಾಲಿಸಿಸ್ ಗೆ 100 ಶೇ., ಔಷಧಾಲಯಗಳಲ್ಲಿ ಶೇ. 12ರ ವರೆಗೆ ರಿಯಾಯಿತಿ ಪಡೆಯಬಹುದು.

ಸಾಮಾನ್ಯ ವಾರ್ಡ್ ನಲ್ಲಿ ಒಳರೋಗಿಯಾಗಿ ದಾಖಲಾದರೆ ಉಪಯೋಗಿಸುವ ವಸ್ತು ಹಾಗೂ ಪ್ಯಾಕೇಜ್ ಹೊರತುಪಡಿಸಿ ಶೇ. 25 ರಿಯಾಯಿತಿ ಸಿಗಲಿದೆ ಎಂದರು.

ವೈದ್ಯಕೀಯ ಮತ್ತು ದಂತ ವಿಜ್ಞಾನಗಳ ಸಹ ಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಮಾಹೆ ಮಂಗಳೂರು ಕ್ಯಾಂಪಸ್ ಸಹ ಉಪಕುಲಪತಿ ಡಾ. ದಿಲೀಪ್ ಜಿ.ನಾಯ್ಕ್, ಸಹ ಉಪ ಕುಲಪತಿ ಡಾ. ವೆಂಕಟರಾಯ ಎಂ. ಪ್ರಭು, ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಡಾ. ಬಿ. ಉನ್ನಿಕೃಷ್ಣನ್, ಡಾ. ಕೃಷ್ಣ ಪ್ರಸಾದ್ ಇದ್ದರು.

ಕೆಎಂಸಿ, ನೆಟ್ ವರ್ಕ್ ಆಸ್ಪತ್ರೆಗಳು, ಅಧಿಕೃತ ಪ್ರತಿನಿಧಿಗಳಲ್ಲಿ ಕಾರ್ಡ್ ಖರೀದಿಸಬಹುದು.

ಹೆಚ್ಚಿನ ಮಾಹಿತಿಗೆ 9980854700 ಅಥವಾ 0820-2923748ನ್ನು ಸಂಪರ್ಕಿಸಬಹುದು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!