Monday, July 4, 2022
Home ಲೋಕಾಭಿರಾಮ ವ್ಯಸನಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಮೂಡಿಸಿ

ವ್ಯಸನಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಮೂಡಿಸಿ

ವ್ಯಸನಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಮೂಡಿಸಿ

(ಸುದ್ದಿಕಿರಣ ವರದಿ)

ಉಡುಪಿ: ಇಂದಿನ ಯುವಜನತೆ ಆರೋಗ್ಯದ ಮಹತ್ವ ಮರೆತು ದುಶ್ಚಟಗಳಿಗೆ ಬಲಿಯಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದಾರೆ. ಸಾಂಕ್ರಮಿಕ ಕಾಯಿಲೆಯಷ್ಟೇ ಮಾರಕವಾಗಿರುವ ವಿವಿಧ ವ್ಯಸನಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಿ, ದುಶ್ಚಟಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.

ಸೋಮವಾರ ಮಲ್ಪೆ ಮೀನುಗಾರರ ಸಂಘ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರರ ಸಂಘ ಉಡುಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮೀನುಗಾರರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಸಾಂಕ್ರಾಮಿಕ ರೋಗ ಮತ್ತು ಆರೋಗ್ಯ ಬಗ್ಗೆ ಜಾಗೃತಿ ಹೊಂದಿರಬೇಕು. ಮೀನುಗಾರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು.

ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ಕೃಷ್ಣ ಸುವರ್ಣ, ಮೀನುಗಾರರು ತಮ್ಮ ದೈನಂದಿನ ಕೆಲಸದ ಒತ್ತಡದಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಲ್ಪೆಯನ್ನು ಮಲೇರಿಯಾ, ಡೆಂಗ್ಯೂ ಇನ್ನಿತರ ಸಾಂಕ್ರಾಮಿಕ ಕಾಯಿಲೆ ಹಾಗೂ ತಂಬಾಕು ಮುಕ್ತ ಮಲ್ಪೆಯನ್ನಾಗಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಗಣೇಶ್, ಸಹಾಯಕ ನಿರ್ದೇಶಕಿ ಸುಷ್ಮಾ, ಮಣಿಪಾಲ ಕೆ.ಎಂ.ಸಿ ವೈದ್ಯ ಡಾ. ಮುರುಳೀಧರ ಕುಲಕರ್ಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ ರಾವ್ ಮೊದಲಾದವರಿದ್ದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಸ್ವಾಗತಿಸಿದರು. ಮನೋಜ್ ಕುಮಾರ್ ನಿರೂಪಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!