Sunday, July 3, 2022
Home ಲೋಕಾಭಿರಾಮ ಕಪ್ಪು ಶಿಲೀಂಧ್ರ ಸೋಂಕಿನ ಬಗ್ಗೆ ಭಯ ಬೇಡ

ಕಪ್ಪು ಶಿಲೀಂಧ್ರ ಸೋಂಕಿನ ಬಗ್ಗೆ ಭಯ ಬೇಡ

ಉಡುಪಿ: ಕಪ್ಪು ಶಿಲೀಂಧ್ರ ಸೋಂಕು ಹೊಸ ಕಾಯಿಲೆಯಲ್ಲ. ಅದು ಈ ಮೊದಲೂ ಇತ್ತು. ಈ ಸೋಂಕಿನ ಬಗ್ಗೆ ಭಯ ಬೇಡ. ಆದರೆ, ಸೂಕ್ತ ಮುಂಜಾಗ್ರತೆ ಅಗತ್ಯ ಎಂದು ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಸಮೂಹ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಹಾಗೂ ಖ್ಯಾತ ನೇತ್ರತಜ್ಞ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದ್ದಾರೆ.

ಮ್ಯೂಕರ್ಮೈಕೋಸಿಸ್ ಎಂದು ಕರೆಯಲ್ಪಡುವ ಈ ಶಿಲೀಂಧ್ರ ಸೋಂಕು, ಕೋವಿಡ್ ನಿಂದ ಗುಣಮುಖರಾದ ಕೆಲವರಲ್ಲಿ, ಅದರಲ್ಲೂ ಮಧುಮೇಹಿಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸೋಂಕು ಕಣ್ಣು ಮತ್ತು ಮೂಗಿನಲ್ಲಿ ಕಂಡುಬಂದು ಮುಂದಕ್ಕೆ ಮೆದುಳಿಗೂ ಹರಡಬಹುದು. ಕಣ್ಣು, ಕಪ್ಪು ಬಣ್ಣಕ್ಕೆ ತಿರುಗಿದಾಗ ಆ ಕಣ್ಣನ್ನು ತೆಗೆಯಬೇಕಾದ ಪರಿಸ್ಥಿತಿ ಬರುತ್ತದೆ. ರೋಗಿ ಆ ಸ್ಥಿತಿಗೆ ತಲುಪುವುದಕ್ಕಿಂತ ಮುಂಚೆ ಚಿಕಿತ್ಸೆಗೆ ಬರಬೇಕು ಎಂದು ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಸೋಂಕು ತಡೆ ಹೇಗೆ?
90 ಶೇ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯಲ್ಲಿ ಸ್ಟಿರಾಡ್ ಪ್ರಯೋಗಿಸುತ್ತಾರೆ. ರೋಗಿ ಡಿಸ್ಚಾರ್ಜ್ ಆದಾಗ ಬಹಳ ಸಂತೋಷದಿಂದ ಮನೆಗೆ ಬಂದಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ನೀಡಬೇಕಾದ ಅಗತ್ಯ ಸಲಹೆ ಏನೆಂದರೆ ಮನೆಗೆ ಬಂದ ನಂತರ ಆದಷ್ಟು ಪರಿಸರದ ಗಿಡ, ಎಲೆಗಳ ಸಂಪರ್ಕಕ್ಕೆ ಬಾರದಂತೆ ಜಾಗ್ರತೆ ವಹಿಸುವುದು ಮತ್ತು ಸಾಕುಪ್ರಾಣಿಗಳಾದ ಬೆಕ್ಕು, ನಾಯಿ ಅಥವಾ ಪಕ್ಷಿಗಳ ಸಂಪರ್ಕದಿಂದ ದೂರ ಇರುವುದು. ಮನೆಯಲ್ಲಿ ಉಪಯೋಗಿಸುವ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಗೆ ಸ್ಟೆರೈಲ್ಡ್ ನೀರು ಬಳಸುವುದು ಮತ್ತು ಸ್ವಚ್ಛತೆ ಕಾಪಾಡುವುದು.

ಹಬೆ ತೆಗೆದುಕೊಳ್ಳುವಾಗ ಬಿಸಿನೀರಿಗೆ ಒಂದು ತೊಟ್ಟು ನೀಲಗಿರಿ ಎಣ್ಣೆ ಬಳಸಬೇಕು. ಬಾಯಿ, ಗಂಟಲು ಮುಕ್ಕಳಿಸುವಾಗ ಗಂಟಲನ್ನು ಕ್ಲೋರೊಹೆಕ್ಸೈಡಿನ್ ನಿಂದ ಗಾರ್ಗಲ್ ಮಾಡಬೇಕು. ಅದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಸೋಂಕು ತಡೆಗಟ್ಟುತ್ತದೆ ಎಂಬ ಮಾಹಿತಿ ನೀಡಬೇಕು.

ಕೋವಿಡ್ ನಿಂದ ಗುಣ ಹೊಂದಿದವರು ಮಧುಮೇಹ ನಿಯಂತ್ರಣದಲ್ಲಿರಿಸಿಕೊಂಡು ತಮ್ಮ ದೇಹದ ಇಮ್ಯೂನಿಟಿ ಹೆಚ್ಚಿಸಲು ಪ್ರಯತ್ನಿಸಬೇಕು. ಮತ್ತು ಅದಕ್ಕಾಗಿ ವೈದ್ಯರು ಹೇಳಿರುವ ಔಷಧಿ ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕು. ಅವರ ಸೂಚನೆ ಪಾಲಿಸಬೇಕು ಎಂದು ಡಾ. ಕೃಷ್ಣಪ್ರಸಾದ್ ಸಲಹೆ ನೀಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!