ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ರೇಡಿಯಾಲಜಿ ದಿನಾಚರಣೆ
ಮಣಿಪಾಲ, ನ. 9 (ಸುದ್ದಿಕಿರಣ ವರದಿ): ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋ ಡಯಗ್ನೊಸಿಸ್ ವಿಭಾಗ ಆಶ್ರಯದಲ್ಲಿ ವಿಶ್ವ ವಿಕಿರಣಶಾಸ್ತ್ರ (ರೇಡಿಯಾಲಜಿ) ದಿನ ಆಚರಿಸಲಾಯಿತು.
ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ, ಮಾಹಿತಿ ಕಿರುಪುಸ್ತಕ ಅನಾವರಣಗೊಳಿಸಿದರು.
ಇಂಟರ್ವೆನ್ಷನಲ್ ರೇಡಿಯಾಲಜಿ- ರೋಗಿಗೆ ಸಕ್ರಿಯ ಆರೈಕೆ ಎಂಬ ಧ್ಯೇಯವಾಕ್ಯದಡಿ ಈ ಬಾರಿ ವಿಶ್ವ ರೇಡಿಯಾಲಜಿ ದಿನಾಚರಣೆ ಮಾಡಲಾಗುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿ ವಹಿಸುವ ಪ್ರಮುಖ ಪಾತ್ರವನ್ನು ಇದು ಎತ್ತಿಹಿಡಿಯುತ್ತದೆ. ಈಚಿನ ದಿನಗಳಲ್ಲಿ ರೇಡಿಯಾಲಜಿ ವಿಭಾಗ ರೋಗ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಅತಿಥಿಯಾಗಿದ್ದ ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್ ಎಕ್ಸ್ ರೇ ಆವಿಷ್ಕಾರ ಹಲವು ವಿಶೇಷ ವಿಭಾಗಗಳು ಮತ್ತು ಉಪವಿಭಾಗಗಳಿಗೆ ಹೇತುವಾಗಿದ್ದು, ಎಕ್ಸ್ ರೇ ಇಂದು ಹಲವು ವಿಭಾಗಗಳಿಗೆ ಬ್ರೆಡ್ ಮತ್ತು ಬಟರ್ ಇದ್ದಂತೆ ಎಂದು ಬಣ್ಣಿಸಿದರು.
ಕೆಎಂಸಿ ಮುುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಇದ್ದರು.
ರೇಡಿಯೋ ಡಯಾಗ್ನೊಸಿಸ್ ವಿಭಾಗ ಮುಖ್ಯಸ್ಥೆ ಡಾ. ಪ್ರಕಾಶಿನಿ ಕೆ. ಕಾರ್ಯಕ್ರಮದ ಅವಲೋಕನ ನೀಡಿದರು. ರೇಡಿಯೊ ಡಯಾಗ್ನೊಸಿಸ್ ವಿಭಾಗ ಪ್ರಾಧ್ಯಾಪಕ ಡಾ. ರಾಜಗೋಪಾಲ್ ಕೆ. ವಿ. ಸ್ವಾಗತಿಸಿದರು. ಡಾ. ಚೇತನ್ ಕುಮಾರ್ ಎಂ. ವಂದಿಸಿದರು