ಮಣ್ಣು ಕದ್ದ ಕಳ್ಳರು-ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು

ಮಣ್ಣು ಕದ್ದ ಕಳ್ಳರು-ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು

ಮಣ್ಣು ಕದ್ದ ಕಳ್ಳರು-ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು

ಇಂಡಿ:ತಾಲೂಕು ವ್ಯಾಪ್ತಿಯಲ್ಲಿ 'ಗಣಿ ಮಾಫಿಯಾ' ತಂಡ ಬರದಿಂದ ಕಂಗಾಲಾಗಿರುವ ರೈತರಿಗೆ ಹಣದ ಆಮಿಷವೊಡ್ಡಿ, ಬೆಳೆಗೆ ಯೋಗ್ಯವಾದ ಕಂದಾಯ ಭೂಮಿ ಸೇರಿದಂತೆ ಸರ್ಕಾರಿ ಜಾಗಗಳಲ್ಲೂ ಎಗ್ಗಿಲ್ಲದೆ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ತಾಲೂಕಿನ ಪಡನೂರ ಗ್ರಾಮದಲ್ಲಿ ಸುಮಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಭೂ ಕಬಳಿಕೆದಾರರಿಗೆ ಖಾತೆಯಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ತನಿಖೆ ಹೆಸರಿನಲ್ಲಿ ತಾಲೂಕು ಆಡಳಿತ ಕೈ ತೊಳೆದುಕೊಂಡಿರುವುದು ಒಂದೆಡೆಯಾದರೆ, ನಿರಂತರವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದರೂ ಕಂಡೂಕಾಣದಂತೆ ಜಾಣಕುರುಡುತನ ಪ್ರದರ್ಶಿಸುವ ಮೂಲಕ ಮಾಫಿಯಾವನ್ನು ಬೆಂಬಲಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ. ನಿಯಮ ಬಾಹಿರವಾಗಿ ಗಣಿಗಾರಿಕೆ: ತಾಲೂಕಿನ ಪಡನೂರ ಭೂ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಮಾಫಿಯಾ ಜಾಲವೊಂದು ನಿರಂತರವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿದೆ. ರಾತ್ರಿ ವೇಳೆ ಸುಮಾರು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಮಣ್ಣು ತೆಗೆದು ನೂರಾರು ಲಾರಿಗಳ ಮೂಲಕ ತಾಲೂಕಿನಲಿ ಪ್ರತಿಯೊಂದು ಇಟ್ಟಿಗೆ ಬಟ್ಟಿಗೆ  ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಸರ್ಕಲ್ ಮತ್ತು ತಲಾಟಿ ಅವರ  ಗಮನಕ್ಕೆ ತಂದಾಗ, ಹಗಲಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಣ್ಣು ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸುವುದಾಗಿ ಹೇಳಿ ಬಂದಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದ ಮಣ್ಣು ಮಾಫಿಯಾ ತಂಡ ರಾತ್ರಿಯಾಗುತ್ತಿದ್ದಂತೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿದೆ. ಬರವನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು: ಕೃಷಿ ಭೂಮಿಯ ಮಣ್ಣು ಮಾರಾಟ ಮಾಡುವಂತಿಲ್ಲವೆಂಬ ನಿಯಮವಿದೆ. ಆದರೆ ಪ್ರಸ್ತುತ ವರ್ಷ ಎದುರಾಗಿರುವ ಬರಗಾಲದಿಂದ ಬೆಳೆಗೆ ನೀರಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ 'ಮಣ್ಣು ಮಾಫಿಯಾ'ಗಾರರು ರೈತರ ಮನವೊಲಿಸಿ ದುಡ್ಡುಕೊಟ್ಟು . ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದುಕೊಳ್ಳುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೃಷಿ ಮತ್ತು ಕಂದಾಯ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ರಾತ್ರಿವೇಳೆ ನೂರಾರು ಲಾರಿಗಳಲ್ಲಿ ಮಣ್ಣು ಸಾಗಿಸುತ್ತಿದ್ದಾರೆ. ರೈತರಿಗೆ ಬಿಡಿಗಾಸು ನೀಡಿ ಇಂಡಿ ಸೇರಿದಂತೆ ಇತರೆಡೆಗಳಲ್ಲಿ ನಡೆಯುವ ಕೆಲ ಕಾಮಗಾರಿಗಳಿಗೆ  ಮಾರಾಟ ಮಾಡುತ್ತಿದ್ದಾರೆ. ದಿನವಹಿ ಹತ್ತಾರು ಇಟಾಚಿ, ಜೆಸಿಬಿಗಳಿಂದ ಮಣ್ಣು ತೆಗೆಸಿ ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಿಸುತ್ತಿದ್ದು, ಈ ಅಕ್ರಮ ವಹಿವಾಟಿನಿಂದ ಮಧ್ಯವರ್ತಿಗಳು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಕೃಷಿಗೆ ಯೋಗ್ಯವಲ್ಲದ ಗುಡ್ಡ ಪ್ರದೇಶ ಹಾಗೂ ಸರ್ಕಾರಿ ಭೂಮಿಯಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಇಲಾಖೆ ನಿಗದಿಪಡಿಸುವ ರಾಯಲ್ಟಿ ಪಾವತಿಸಿ ಗಣಿಗಾರಿಕೆ ನಡೆಸಬೇಕು. ಆದರೆ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳು ಪ್ರಭಾವಿಗಳ ಬೆಂಬಲದಿಂದ ರೈತರ ಕೃಷಿ ಭೂಮಿ ಜತೆಗೆ, ಇವುಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಭೂಮಿಗಳಲ್ಲೂ ಸುಮಾರು 20 ಅಡಿ ಆಳದವರೆಗೂ ಮಣ್ಣು ಗಣಿಗಾರಿಕೆ ನಡೆಸುತ್ತಾ ಸರ್ಕಾರಕ್ಕೆ ಹೋಗಬೇಕಿದ್ದ ರಾಜಧನಕ್ಕೂ ಕತ್ತರಿ ಹಾಕುತ್ತಿದ್ದಾರೆ.

ಪಡನೂರಿನ ಭೀಮಾನದಿದಡದಲ್ಲಿನ ಭೂಮಿಯಲ್ಲಿ ಸುಮಾರು 20 ಅಡಿಗಳವರೆಗೂ ಆಳಕ್ಕೆ ಮಣ್ಣು ಎತ್ತಿಸಲಾಗಿದೆ. ಹಣದಾಸೆಗೆ ತಮ್ಮ ಜಮೀನುಗಳಲ್ಲಿನ ಮಣ್ಣು ಮಾರಾಟ ಮಾಡಿಕೊಂಡಿರುವ ರೈತರು ಮತ್ತೆ ಕೃಷಿಗೆ ಯೋಗ್ಯವಾಗುವಂತೆ ಜಮೀನನನ್ನು ಹದಗೊಳಿಸಿಕೊಳ್ಳಲು ಪಡೆದ ಹಣಕ್ಕಿಂತ ದುಪ್ಪಟ್ಟು ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿರುವವರ ವಿರುದ ಕ್ರಮ ವಹಿಸುವರೇ ಎಂದು ಕಾದು ನೋಡಬೇಕಿದೆ.