ಲೀಸ್ ಅವಧಿ ಮುಗಿಯುವ ಮುನ್ನ ಅಂಗಡಿ ಖಾಲಿ ಮಾಡುವಂತೆ ಒತ್ತಡ: ನಾರಾಯಣಪ್ಪ ಆರೋಪ
ಬೇತಮಂಗಲ: ಲೀಸ್ ಅವಧಿ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಅಂಗಡಿ ಖಾಲಿ ಮಾಡುವಂತೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ ಎಂದು ಕ್ಯಾಸಂಬಳ್ಳಿ ಗ್ರಾಮದ ನಾರಾಯಣಪ್ಪ ಆರೋಪಿಸಿದ್ದಾರೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಡಿಸೆಂಬರ್ 9ರಂದು ಅಂಗಡಿಯನ್ನು ಲೀಸ್ಗೆ ಪಡೆದುಕೊಂಡಿದ್ದು, ಒಪ್ಪಂದದ ಅವಧಿ 2026ರ ಡಿಸೆಂಬರ್ 9ರವರೆಗೆ ಇದೆ. ಆದರೆ ಅಂಗಡಿ ಮಾಲೀಕ ಕೇಶವ ಅವರು ಏಕಾಏಕಿ ಅಂಗಡಿ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.
ಅಂಗಡಿಯ ಮುಂದೆ ಉದ್ದೇಶಪೂರ್ವಕವಾಗಿ ವಾಹನಗಳನ್ನು ನಿಲ್ಲಿಸುವುದು, ಗ್ರಾಹಕರು ಅಂಗಡಿಗೆ ಬಾರದಂತೆ ಕಟ್ಟಡ ಸಾಮಗ್ರಿಗಳನ್ನು ಅಡ್ಡ ಹಾಕುವುದು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡಲಾಗುತ್ತಿದೆ. ಈ ಮೂಲಕ ಅಂಗಡಿ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ನಾರಾಯಣಪ್ಪ ಆರೋಪಿಸಿದರು.
ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ, ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಅಂಗಡಿಯನ್ನು ಉಚಿತವಾಗಿ ನೀಡಲಾಗಿದೆ, ಎರಡು ವರ್ಷಕ್ಕೆ ಕರಾರು ಮಾಡಿರುವುದು , ಅವಧಿ ಮುಗಿದಿದೆ ಕರಾರು ಪತ್ರ ನನ್ನ ಬಳಿ ಇದೆ ಎಂದು ಡಿಮ್ಕಿ ಹಾಕುತ್ತಾನೆ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗಿಲ್ಲ ಹಾಗೂ ಯಾವುದೇ ಹಣ ಪಡೆದಿಲ್ಲ ಎಂದು ಮಾಲೀಕರು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಆಗಸ್ಟ್ 20ರಿಂದ ಅಂಗಡಿಗೆ ಬೀಗ ಹಾಕಲಾಗಿದ್ದು, ಅಂಗಡಿಯ ಆದಾಯವೇ ತಮ್ಮ ಜೀವನಾಧಾರವಾಗಿದೆ. ಅಲ್ಲದೆ ಸಾಲ ಮಾಡಿಕೊಂಡಿದ್ದು ಪ್ರತಿದಿನ ಹಣಕಾಸು ಸಂಸ್ಥೆಗೆ ಕಂತು ಪಾವತಿಸಬೇಕಾಗಿದೆ. ತಾವು ನೀಡಿರುವ 2 ಲಕ್ಷ ಹಣವನ್ನು ಮರಳಿಸುವುದರ ಜೊತೆಗೆ, ಅಂಗಡಿ ಮುಚ್ಚಿರುವುದರಿಂದ ಉಂಟಾದ ಆದಾಯ ನಷ್ಟ ಹಾಗೂ ಲೀಸ್ ಅವಧಿ ಮುಗಿಯುವವರೆಗೆ ಬಾಕಿ ಇರುವ ನಾಲ್ಕು ತಿಂಗಳ ಅವಧಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನಾರಾಯಣಪ್ಪ ಒತ್ತಾಯಿಸಿದರು.
ತಮ್ಮ ಬೇಡಿಕೆಗಳನ್ನು ಪರಿಹರಿಸಿದರೆ ಅಂಗಡಿ ಖಾಲಿ ಮಾಡಲು ಸಿದ್ಧವಿರುವುದಾಗಿ ಅವರು ತಿಳಿಸಿದರು. ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾರಾಯಣಪ್ಪ ಆಗ್ರಹಿಸಿದರು.