ಪೆದ್ದೂರು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ 52ನೇ ವರ್ಷದ ಶ್ರೀ ಸುಬ್ರಮಣ್ಯ ಸ್ವಾಮಿಯ ಕಾವಡಿ ಮಹೋತ್ಸವ
ಮುಳಬಾಗಿಲು: ತಾಲ್ಲೂಕಿನ ಬೈರಕೂರು ಹೋಬಳಿಯ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆದ್ದೂರು ಗ್ರಾಮದಲ್ಲಿ 52ನೇ ವರ್ಷದ ಶ್ರೀ ಸುಬ್ರಮಣ್ಯ ಸ್ವಾಮಿಯ ಕಾವಡಿ ಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.
ಮಹೋತ್ಸವದ ಅಂಗವಾಗಿ ಗ್ರಾಮದ ಶ್ರೀ ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಗೆ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪೆದ್ದೂರು ಗ್ರಾಮದಲ್ಲಿ ಗ್ರಾಮಸ್ಥರು ಒಗ್ಗೂಡಿ ಸುಮಾರು ಐದು ದಶಕಗಳಿಂದ ಶ್ರೀ ಸುಬ್ರಮಣ್ಯ ಸ್ವಾಮಿಯ ಕಾವಡಿ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಸಂಭ್ರಮದಿಂದ ಮಹೋತ್ಸವವನ್ನು ಆಚರಿಸಲಾಯಿತು.
ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಇಡೀ ಗ್ರಾಮವು ಹಬ್ಬದ ಸಂಭ್ರಮದಲ್ಲಿ ಕಂಗೊಳಿಸುತ್ತಿತ್ತು.
ಹಬ್ಬದ ಕೊನೆಯ ಘಟ್ಟದಲ್ಲಿ ಸಾಯಂಕಾಲ ಭಕ್ತಾದಿಗಳು ಕಾವಡಿಗಳನ್ನು ಹೊತ್ತು, ನೃತ್ಯ ಮಾಡುತ್ತಾ ಹಾಗೂ ಸ್ವಾಮಿಯ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕಾವಡಿ ಮೆರವಣಿಗೆಯಲ್ಲಿ ಭಕ್ತರ ಉತ್ಸಾಹ, ಭಕ್ತಿಭಾವ ಹಾಗೂ ಸಂಭ್ರಮ ಗಮನಸೆಳೆಯಿತು.
ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ದಿನವಿಡೀ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾವಡಿ ಮಹೋತ್ಸವದಲ್ಲಿ ಪಾಲ್ಗೊಂಡರು.