ಜನರ ಬಳಿಗೇ ಆಡಳಿತ, ತ್ವರಿತ ಪರಿಹಾರಕ್ಕೆ ಆದ್ಯತೆ

ಜನರ ಬಳಿಗೇ ಆಡಳಿತ, ತ್ವರಿತ ಪರಿಹಾರಕ್ಕೆ ಆದ್ಯತೆ

    ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು *‘ಪ್ರಜಾಸೇವಾ ಅಭಿಯಾನ’*ಕ್ಕೆ ಚಾಲನೆ ನೀಡುತ್ತಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನ ಆರಂಭವಾಗಲಿದೆ.

ಪ್ರತಿ ಶನಿವಾರ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅರ್ಜಿ ಹಾಗೂ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಸಾಧ್ಯವಾದಷ್ಟು ಸೇವೆಗಳನ್ನು ಸ್ಥಳದಲ್ಲಿಯೇ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಹವಾಲುಗಳ ಪ್ರಗತಿಯನ್ನು ಪ್ರತಿ ಬುಧವಾರ ತಾಲ್ಲೂಕು, ಉಪವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳನ್ನು ಮೇಲ್ದರ್ಜೆಗೆ ವರ್ಗಾಯಿಸುವ ವ್ಯವಸ್ಥೆಯೂ ಇರಲಿದೆ.

ಸಾರ್ವಜನಿಕರು *1902 ಸಹಾಯವಾಣಿ* ಅಥವಾ *IPGRS ಪೋರ್ಟಲ್* ಮೂಲಕ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು. ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮವು ಪಾರದರ್ಶಕ ಹಾಗೂ ಉತ್ತರದಾಯಿ ಆಡಳಿತಕ್ಕೆ ಒತ್ತು ನೀಡಲಿದೆ ಎಂದು *ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್* ತಿಳಿಸಿದ್ದಾರೆ.