ಬೆಳಕವಾಡಿ,ಮದ್ದೂರು,ಹಲಗೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ

ಬೆಳಕವಾಡಿ,ಮದ್ದೂರು,ಹಲಗೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ

ಬೆಳಕವಾಡಿ,ಮದ್ದೂರು,ಹಲಗೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ

ಮಂಡ್ಯ: ಜಿಲ್ಲೆಯ ಬೆಳಕವಾಡಿ, ಮದ್ದೂರು ಹಾಗೂ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದ್ದ ಹಣ ವಂಚನೆ, ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ೧೧ ಆರೋಪಿಗಳನ್ನು ಬಂಧಿಸಿ ಸುಮಾರು ೮೭.೫ ಲಕ್ಷ ಮೌಲ್ಯದ ನಗದು ಹಣ ಹಾಗೂ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಷಾಪುರ ಗ್ರಾಮದಲ್ಲಿರುವ ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸಂಸ್ಥೆಗೆ ಸಹಾಯ ಮಾಡುವುದಾಗಿ ಒಬ್ಬ ವ್ಯಕ್ತಿಯು ೧ ಕೋಟಿ ಹಣಕ್ಕೆ ೨೫ ಕೋಟಿ ಹಣ ದುಪ್ಪಟ್ಟು ಮಾಡಿಕೊಡುತ್ತೇನೆಂದು ನಂಬಿಸಿ,ಹಣ ತರಿಸಿಕೊಂಡು ಸಿಹಿ ಪೊಂಗಲ್ ಮತ್ತು ಜ್ಯೂಸ್‌ನಲ್ಲಿ ಪೌಡರ್ ಅನ್ನು ಹಾಕಿ ಪ್ರಜ್ಞೆ ತಪ್ಪಿಸಿ ೭೦ ಲಕ್ಷ ರೂ.ಹಣ ದೋಚಿರುವುದಾಗಿ ಸದರಿ ಸಂಸ್ಥೆಯ ಎಸ್.ಮೇರಿ ಎಂಬುವವರು ನೀಡಿದ ದೂರಿನ ಮೇರೆಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖಾ ತಂಡ ತನಿಖೆ ಕೈಗೊಂಡು ಆಂಧ್ರ ಮೂಲದ ಹಾಲಿ ಚಾಮರಾಜನಗರ ಜಿಲ್ಲೆಯ ಸಿಂಗಾನಲ್ಲೂರು ಗ್ರಾಮವಾಸಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿಯಿಂದ ಒಟ್ಟು ಸುಮಾರು ೪೩,೮೮,೫೦೦/-ರೂ (ನಲ್ವತ್ತಮೂರು ಲಕ್ಷದ, ಎಂಬತ್ತೆಂಟು ಸಾವಿರದ, ಐದುನೂರು ರೂ.ಗಳು)ಮೌಲ್ಯದ ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು ೦೭ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ವಿವರಿಸಿದರು.
ಮನೆ ಕಳ್ಳತನ ಪ್ರಕರಣಗಳು
ಹಲಗೂರು ಪೊಲೀಸರ ಕಾರ್ಯಾಚರಣೆ: ಮಳವಳ್ಳಿ ತಾಲ್ಲೂಕು ತೊರೆಕಾಡನಹಳ್ಳಿ ನಿವಾಸಿ ಅರ್ಜುನ್ ಎಂಬುವವರು ಕಳೆದ ೨೦೨೩ ಅಕ್ಟೋಬರ್ ೪ ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತವಾಗಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಮುರಿದು ೨೬ ಗ್ರಾಂ. ನಷ್ಟು ತೂಕದ ಚಿನ್ನದ ಒಡವೆಗಳು ಹಾಗೂ ೨೦,೦೦೦ ರೂ. ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸದರಿ ಆರೋಪಿಗಳ ಪತ್ತೆ ತಂಡವು ಎಲ್ಲಾ ಆಯಾಮಗಳ ಮೂಲಕ ತನಿಖೆ ಕೈಗೊಂಡು ಇಬ್ಬರು  ಆರೋಪಿತರನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿಗಳಿಂದ ಹಲಗೂರು ಮತ್ತು ಮಳವಳ್ಳಿಯ ವಿವಿಧೆಡೆ ಕಳುವು ಮಾಡಿದ್ದ ೬,೭೦,೦೦೦/- (ಆರು ಲಕ್ಷದ ಎಪ್ಪತ್ತು ಸಾವಿರ) ರೂಪಾಯಿ ಮೌಲ್ಯದ  ಒಟ್ಟು ೧೨೨ ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮದ್ದೂರು ಪೊಲೀಸರ ಕಾರ್ಯಾಚರಣೆ: ಮದ್ದೂರು ಟೌನ್ ಕೆ.ಎಚ್.ನಗರ ನಿವಾಸಿ ಡಾ.ಚಂದ್ರು ಜನವರಿ ೧೭ ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತವಾಗಿ ಹೊರಗಡೆ ಹೋಗಿದ್ದಾಗ ಕಳ್ಳರು ಮನೆಯ ಬಾಗಿಲನ್ನು ಮುರಿದು ಮನೆಯ ರೂಮ್ ಬೀರುವಿನ ಡ್ರಾನಲ್ಲಿಟ್ಟಿದ್ದ ಸುಮಾರು ಒಂದು ಕೆ.ಜಿ.ಯಷ್ಟು ಚಿನ್ನದ ಒಡವೆಗಳು ಹಾಗು ೦೮ ಲಕ್ಷ  ರೂ. ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ಆರೋಪಿಗಳ ಪತ್ತೆ ತಂಡವು ಎಲ್ಲಾ ಆಯಾಮಗಳ ಮೂಲಕ ತನಿಖೆ ಕೈಗೊಂಡು ೦೮ ಜನ ಆರೋಪಿತರನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ,ಮದ್ದೂರು,ಶ್ರೀರಂಗಪಟ್ಟಣ,ಮೈಸೂರು ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ೩೭,೦೦,೦೦೦/- (ಮೂವತ್ತೇಳು ಲಕ್ಷ) ರೂಪಾಯಿ ಮೌಲ್ಯದ ೬೩೪ ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
 ಸುದ್ದಿಗೋಷ್ಠಿಯಲ್ಲಿ ವಶಪಡಿಸಿಕೊಂಡಿರುವ ನಗದು ಹಣ ಹಾಗೂ ಆಭರಣಗಳನ್ನು ಪ್ರದರ್ಶಿಸಲಾಗಿತ್ತು.
  ಬೆಳಕವಾಡಿ, ಮದ್ದೂರು ಹಾಗೂ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಈ ೩ ಪ್ರಕರಣಗಳಲ್ಲಿ ತನಿಖೆ ಕೈಗೊಂಡಿದ್ದ ಅಪರ ಪೋಲೀಸ್ ಅಧೀಕ್ಷಕರಾದ ಸಿ.ಇ.ತಿಮ್ಮಯ್ಯ,ಎಸ್‌ಇ ಗಂಗಾಧರಸ್ವಾಮಿ,ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ಹಾಗೂ ವಿವಿಧ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡದ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್.ಯತೀಶ್ ಶ್ಲಾಘಿಸಿ ಪ್ರಶಂಸಿಸಿರುತ್ತಾರೆ.
  ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ,ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ಹಾಜರಿದ್ದರು.