ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು-ವೀರಭದ್ರ ಚನ್ನಮಲ್ಲ ನಿಡುಮಾಮಿಡಿ ಶ್ರೀ

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು-ವೀರಭದ್ರ ಚನ್ನಮಲ್ಲ ನಿಡುಮಾಮಿಡಿ ಶ್ರೀ

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು-ವೀರಭದ್ರ ಚನ್ನಮಲ್ಲ ನಿಡುಮಾಮಿಡಿ ಶ್ರೀ

ಬಾಗೇಪಲ್ಲಿ: ವಿದ್ಯಾರ್ಥಿ ಜೀವನವೆಂಬುದು ಅತ್ಯಂತ ಅಮೂಲ್ಯವಾದದ್ದಾಗಿದ್ದು,ಸಮಯ ವ್ಯರ್ಥ ಮಾಡದೇ ಉತ್ತಮ ರೀತಿಯಲ್ಲಿ ಓದಿ ಸಾಧನೆ ಮಾಡಬೇಕು ಎಂದು ಧರ್ಮಗುರು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಜಿಯವರು ತಿಳಿಸಿದರು. ತಾಲೂಕಿನ ಗೂಳೂರು ನಿಡುಮಾಮಿಡಿ ಮಠದ ಡಾ.ಶ್ರೀ ಜಚನಿ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಜಿಯವರು,ಮಠಗಳೆಂದರೆ ಸರಕಾರದಿಂದ ಬಹಳಷ್ಟು ಸೌಲಭ್ಯಗಳು ಹಾಗೂ ನೆರವು ದೊರೆಯುತ್ತಿರುತ್ತದೆ. ಆದರೆ ನಮ್ಮ ಮಠಕ್ಕೆ ನೆರವು ದೊರೆಯುತ್ತಿಲ್ಲ. ಏಕೆಂದರೆ ಈ ಮಠದಲ್ಲಿ ಸಮಾನತೆ, ಜಾತ್ಯಾತೀತ ತತ್ವಗಳನ್ನು ಸೈದ್ಧಾಂತಿಕವಾಗಿ ಅಳವಡಿಸಿಕೊಳ್ಳಲಾಗಿದೆ. ಹಾಗೇಯೆ ಜನಪರವಾದ ಹೋರಾಟಗಳನ್ನು ನಡೆಸಲಾಗಿದೆ. ಮೌಢ್ಯಗಳನ್ನು ವಿರೋಧಿಸದೇ,ಯಥಾಸ್ಥಿತಿ ಕಾಯ್ದುಕೊಂಡರೆ ಒಳ್ಳೆಯವರು ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಆದರೆ ನಾವು ಬದಲಾವಣೆ ಬಯಸಿ ಮಾನವೀಯ ನೆಲೆಗಟ್ಟಿನಲ್ಲಿ ಧ್ವನಿ ಎತ್ತುವುದು ಕೆಲವರಿಗೆ ಅಪಥ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು,ಶಿಕ್ಷಣದ ಅಸ್ತ್ರ ಬಹಳ ದೊಡ್ಡ ಅಸ್ತ್ರವಾಗಿದ್ದು, ಪ್ರಾಮಾಣಿಕತೆ, ಸಾಮಾಜಿಕ ಜವಬ್ದಾರಿಗಳನ್ನು ಬೆಳಸಿಕೊಳ್ಳಬೇಕು. ಹಾಗಾಗಿ ಮಠದ ವತಿಯಿಂದ ಗಡಿಭಾಗದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಈ ಹಿಂದೆ ಬಾಗೇಪಲ್ಲಿ ತಾಲೂಕಿನಲ್ಲಿ 50 ಗ್ರಾಮಗಳಲ್ಲಿ ಹಾಗೂ ಗುಡಿಬಂಡೆ ತಾಲೂಕಿನಲ್ಲಿ 10 ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ ಸೌಲಭ್ಯ ಒದಗಿಸಲು ಶಾಲೆಗಳನ್ನು ತೆರೆಯಲಾಗಿತ್ತು. ಅವನ್ನು 12 ವರ್ಷಗಳ ಕಾಲ ನಡೆಸಿದೆವು. ಆದರೆ ಸರಕಾರದಿಂದ ಸಹಕಾರ ಸೇರಿದಂತೆ ಹಲವು ಅಡಚಣೆಗಳಿಂದ ಮುಂದುವರೆಸಲಾಗಿಲ್ಲ ಎಂದರು. ಈ ಸಂಧರ್ಭದಲ್ಲಿ ಬಿಳ್ಳೂರು ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ಎಂ.ನಾಗರಾಜ್, ದಾನಿಗಳಾದ ಪೋತೇಪಲ್ಲಿ ಎ ಆದಿಮೂರ್ತಿ, ಪ್ರಭು ದೇವ್, ಸಂದೀಪ್ ,ಶಾಲೆಯ ಮುಖ್ಯ ಶಿಕ್ಷಕ ಕೆ.ನಾಗರಾಜ, ಮಂಜುಳಾ, ಮಮತಾ, ವೆಂಕಟೇಶ್ ನಾಯಕ್, ವೈ.ಎನ್ ಶಿವಕುಮಾರ್, ನರಸಿಂಹಮೂರ್ತಿ, ಅಂಬರೀಶ್, ಐವಾರಪಲ್ಲಿ ಗ್ರಾಮಸ್ಥರಾದ ವೆಂಕಟರಮಣಪ್ಪ,ನಂಜುಂಡಪ್ಪ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.