ಸಂಸದ ಅನಂತಕುಮಾರ್ ಹೆಗ್ಗಡೆ ಹೇಳಿಕೆ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಅಹಿಂದ ಸಂಘಟನೆ ವತಿಯಿಂದ ಪ್ರತಿಭಟನೆ

ಸಂಸದ ಅನಂತಕುಮಾರ್ ಹೆಗ್ಗಡೆ ಹೇಳಿಕೆ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಅಹಿಂದ ಸಂಘಟನೆ ವತಿಯಿಂದ ಪ್ರತಿಭಟನೆ

ಚನ್ನರಾಯಪಟ್ಟಣ: ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಅವಾಚ್ಯ ಪದಗಳಿಂದ ನಿಂಧಿಸಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗ್ಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಅಹಿಂದ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ. ರಸ್ತೆ ಮೂಲಕ ಸಾಗಿ ಕೆ ಆರ್ ಸರ್ಕಲ್ ನಲ್ಲಿ ಅನಂತ್ ಕುಮಾರ್ ಹೆಗಡೆಯ ಪ್ರತಿಕೃತಿ ದಹಿಸಿ ಅನಂತ್ ಕುಮಾರ್ ಹೆಗಡೆಯ ವಿರುದ್ಧ ಘೋಷಗಳನ್ನು ಕೂಗಿದ್ದರು, ನಂತರ ತಾಲೂಕು ಕಛೇರಿ ಆವರಣಕ್ಕೆ ಆಗಿ ಆಗಮಿಸಿದ ಪ್ರತಿಭಟನೆಯ ನೇತೃತ್ವ ವಹಿಸಿದ ಅಹಿಂದ ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು ಮಾತನಾಡಿ, ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗ್ಗಡೆಯವರು ಸಭೆಯೊಂದರಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ನಿಂದಿಸಿದ ಹೆಗಡೆ ಸೂಕ್ತ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು, ಅಹಿಂದ ಸಂಘಟನೆಯ ಜಿಲ್ಲಾ ಅಧ್ಯಕ್ಷ ದಿವಾಕರ್ ಗೌಡ ಮಾತನಾಡಿ ರಾಜ್ಯದ ಶಿರಸಿ, ಶ್ರೀರಂಗಪಟ್ಟಣ ಹಾಗೂ ಇತರ ಕಡೆ ಇರುವ ಮಸೀದಿಗಳನ್ನು ಕೆಡವಿ, ಮಂದಿರ ಕಟ್ಟುತ್ತೇವೆ ಹಾಗೂ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಉದ್ದಟತನದಿಂದ ಕಾನೂನು ಬಾಹಿರ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದರು. ದಂಡೋರ ಮಂಜುನಾಥ್ ಮಾತನಾಡಿ ಅನಂತ್ ಕುಮಾರ್ ಹೆಗಡೆಯ ಹೇಳಿಕೆಗಳು ದೇಶದ ಹಾಗೂ ರಾಜ್ಯದ ದಲಿತರ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ
ಮೇಲೆ ನಡೆದ ಗದಾಪ್ರಹಾರವಾಗಿದ್ದು, ಮುಂದಿನ ದಿನಮಾನದಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಅಶಾಂತಿ ತಲೆದೋರಿ ಕೋಮು ಗಲಭೆಗಳಾಗುವ ಸಂಭವವಿದೆ ಆದರಿಂದ ಅನಂತ್ ಕುಮಾರ್ ಹೆಗಡೆಯನ್ನು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಸಿಆರ್ ಅಬ್ದುಲ್ ಆದಿ ಮಾತನಾಡಿ ದೇಶದ ಸಂವಿಧಾನಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇವರ ಹೇಳಿಕೆಗಳು ಬಹಳ ಮುಜುಗರ ಉಂಟುಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದರು, ಪ್ರತಿಭಟನೆಯ ನಂತರ ತಾಲೂಕು ದಂಡಾಧಿಕಾರಿ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ದಿವಾಕರ್ ಗೌಡ,ತಾಲೂಕು ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು, ಸಿ ಆರ್ ಅಬ್ದುಲ್ ಹಾದಿ, ಸಿ ಎನ್ ಮಂಜುನಾಥ್, ಎಂ ಕೆ ಮಂಜೇಗೌಡ, ಜಗದೀಶ್, ಬಿ ರಂಗಪ್ಪ, ಗಾಯಕ ಮಂಜು, ಕುಂಬಾರಬೀದಿ ಗುರುರಾಜ್, ಮುಬಾಶೀರ್ ಅಹ್ಮದ್, ಮಹೇಶ್, ಹರೀಶ್, ರಾಮಚಂದ್ರು, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.