ವಿಜಯಪುರ ಡಿಡಿಪಿಐ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

ವಿಜಯಪುರ ಡಿಡಿಪಿಐ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

ವಿಜಯಪುರ:ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಒಂದೇ ಕುರ್ಚಿಗಾಗಿ ಇಬ್ಬರು ಆಧಿಕಾರಿಗಳ ಕಾದಾಟ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ.ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹಾಲಿ ಡಿಡಿಪಿಐ ಎನ್.ಎಚ್. ನಾಗೂರ ಅವರನ್ನು ಸರಕಾರ ಅಮಾನತುಗೊಳಿಸಿ ಪ್ರಭಾರ ಡಿಡಿಪಿಐ ಆಗಿ ಉಮಾದೇವಿ ಸೊನ್ನವರ ಅವರನ್ನು ಹೊಸದಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಫೆ. 2ರಂದು ಪ್ರಭಾರ ಡಿಡಿಪಿಐ ಉಮಾದೇವಿ ಅಧಿಕಾರ ಸ್ವೀಕರಿಸಿದ್ದರು.ಕಳೆದ ಜನವರಿ 30 ರಂದು ಹಣಕಾಸು ದುರುಪಯೋಗದ ಆರೋಪದ ಮೇಲೆ ಅಮಾನತು ಆಗಿದ್ದ ಹಿಂದಿನ ಡಿಡಿಪಿಐ ಎನ್. ಎಚ್. ನಾಗೂರು ಅವರು ಈ ಮಧ್ಯೆ ಅಮಾನತು ಆದೇಶ ಪ್ರಶ್ನಿಸಿ ಕಲಬುರಗಿಯ ಕೆಎಟಿಗೆ ಹೋಗಿದ್ದರು. ಹಾಗಾಗಿಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠ ಫೆ.7ರಂದು ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದೆ.ಇದರಿಂದಾಗಿ ಹಿಂದಿನ ಡಿಡಿಪಿಐ ನಾಗೂರ ಅವರು ನಾನೇ ಈಗಲೂ ಡಿಡಿಪಿಐ ಹುದ್ದೆಯಲ್ಲಿದ್ದೇನೆ ಎಂದು ಡಿಡಿಪಿಐ ಕಚೇರಿಗೆ ಆಗಮಿಸಿದ್ದಾರೆ. ಪ್ರಭಾತ ಡಿಡಿಪಿಐ ಆಗಿ ಅಧಿಕಾರ ವಹಿಸಿಕೊಂಡ ಉಮಾದೇವಿ ಅವರು ನನಗೆ ಸರಕಾರ ಡಿಡಿಪಿಐ ಹುದ್ದೆಗೆ ನೇಮಿಸಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಕಚೇರಿ ಸಿಬ್ಬಂದಿಗೆ ಯಾರಿಂದ ಕಡತಗಳಿಗೆ ಸಹಿ ಪಡೆಯಬೇಕು ಎಂಬುವುದು ತಿಳಿಯದೇ ಗೊಂದಲಕ್ಕೀಡಾಗಿದ್ದಾರೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಈ ಗೊಂದಲಕ್ಕೆ ಯಾವ ರೀತಿ ತೆರೆ ಎಳೆಯುತ್ತಾರೆಯೋ ಕಾದು ನೋಡಬೇಕಿದೆ.ಸಾರ್ವಜನಿಕ ವಲಯದಲ್ಲಿ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ ಮೋಜಿನ ಸಂಗತಿಯಾಗಿದೆ.