ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಎಸ್‌ಪಿ ಶಿವಾಂಶು ರಾಜಪೂತ್ ಚಾಲನೆ

ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಎಸ್‌ಪಿ ಶಿವಾಂಶು ರಾಜಪೂತ್ ಚಾಲನೆ

         ಕೆಜಿಎಫ್: ಪ್ರತಿಯೊಬ್ಬರ ಆರೋಗ್ಯದಲ್ಲಿ ಕಣ್ಣಿನ ಆರೋಗ್ಯ ಅತ್ಯಂತ ಪ್ರಮುಖವಾಗಿದೆ. ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶಿವಾಂಶು ರಾಜಪೂತ್ ಹೇಳಿದರು.
ಕೆಜಿಎಫ್ ತಾಲ್ಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ದೈನಂದಿನ ಜೀವನದಲ್ಲಿ ದೃಷ್ಟಿಯ ಮಹತ್ವ ಅಪಾರವಾಗಿದೆ. ಕಣ್ಣಿನ ಆರೋಗ್ಯದಲ್ಲಿ ನಿರ್ಲಕ್ಷ್ಯ ತೋರದೆ, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಯಾವುದೇ ರೀತಿಯ ದೃಷ್ಟಿ ಸಮಸ್ಯೆ ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಮಾತನಾಡಿ, ಜೀವನದಲ್ಲಿ ಆರೋಗ್ಯವೇ ಅತ್ಯಂತ ಮುಖ್ಯವಾದ ಸಂಪತ್ತು. ಅದರಲ್ಲೂ ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಕಾಲದಲ್ಲಿ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಅನೇಕ ಗಂಭೀರ ಸಮಸ್ಯೆಗಳನ್ನು ಆರಂಭದಲ್ಲೇ ನಿಯಂತ್ರಿಸಬಹುದು. ಇಂತಹ ಉಚಿತ ಆರೋಗ್ಯ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ಮಾತನಾಡಿ, ಇಂದಿನ ಒತ್ತಡದ ಜೀವನಶೈಲಿಯಲ್ಲಿ ಹಲವರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆರೋಗ್ಯದ ಕಡೆಗೆ ಗಮನ ನೀಡದಿರುವುದು ದೊಡ್ಡ ತಪ್ಪಾಗಿದೆ. ವೃತ್ತಿಯ ಒತ್ತಡ ಎಷ್ಟೇ ಇದ್ದರೂ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿಶೇಷವಾಗಿ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸದೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಸಾರ್ವಜನಿಕರು ಹಾಗೂ ವಕೀಲರಿಗೆ ಉಚಿತ ನೇತ್ರ ತಪಾಸಣೆ ನಡೆಸಿ, ಅಗತ್ಯ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಹಾಗೂ ಇತರರು ಉಪಸ್ಥಿತರಿದ್ದರು.