ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ: ಹೆಸರು ಕೈಬಿಟ್ಟಿದ್ದರೆ ಫಾರಂ–6 ಸಲ್ಲಿಸಲು 40 ದಿನಗಳ ಕಾಲಾವಕಾಶ

ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ: ಹೆಸರು ಕೈಬಿಟ್ಟಿದ್ದರೆ ಫಾರಂ–6 ಸಲ್ಲಿಸಲು 40 ದಿನಗಳ ಕಾಲಾವಕಾಶ

     ಕೆಜಿಎಫ್: ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಪಟ್ಟಿಯನ್ನು ಆಯಾ ಮತಗಟ್ಟೆ ಕೇಂದ್ರಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಂಟಿಸಲಾಗುತ್ತಿದೆ. ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿರುವುದು ಕಂಡುಬಂದರೆ, ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರನ್ನು ಸಂಪರ್ಕಿಸಿ, ಅಗತ್ಯ ದಾಖಲೆಗಳೊಂದಿಗೆ ಫಾರಂ–6 ಭರ್ತಿ ಮಾಡಿ ಸಲ್ಲಿಸುವಂತೆ ತಾಲೂಕು ಮತದಾರರ ನೋಂದಣಿ ನೋಡಲ್ ಅಧಿಕಾರಿ ಗೀತಮ್ಮ ಅವರು ತಿಳಿಸಿದ್ದಾರೆ.

ತಾಲೂಕು ಕಚೇರಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರಿಗೆ ತಮ್ಮ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿಕೊಳ್ಳಲು 40 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು. ಅರ್ಹ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಆಗಸ್ಟ್ 24, 2026ರ ಅನ್ವಯ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,63,326 ಮತದಾರರು ಇದ್ದಾರೆ. ಇವರಲ್ಲಿ 80,369 ಪುರುಷರು, 82,930 ಮಹಿಳೆಯರು ಹಾಗೂ 27 ಇತರೆ ಮತದಾರರು ಸೇರಿದ್ದಾರೆ.
16 ಜೂನ್ 2026ರಂದು ಕ್ಷೇತ್ರದಲ್ಲಿ ಒಟ್ಟು 2,01,274 ಮತದಾರರು ಇದ್ದರೆ, ಪರಿಷ್ಕರಣೆಯ ನಂತರ ಆಗಸ್ಟ್ 24ರಂದು ಈ ಸಂಖ್ಯೆ 1,63,326ಕ್ಕೆ ಇಳಿಕೆಯಾಗಿದೆ. ಹೀಗಾಗಿ ಎಸ್‌ಐಆರ್ ಪರಿಷ್ಕರಣೆಯ ಬಳಿಕ ಮತದಾರರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ದಾಖಲಾಗಿದೆ.
ಪರಿಷ್ಕರಣೆಯಲ್ಲಿ ಗುರುತಿಸಲಾದ ವಿವರ
ಒಟ್ಟು ಗುರುತಿಸಲಾದ ಮತದಾರರು: 1,63,326 (ಶೇ.81.15)
ಆಧಾರ್/ಮಾಹಿತಿ ಪರಿಶೀಲನೆಯಿಂದ ಗೈರು ಎಂದು ಗುರುತಿಸಲಾದವರು: 1,499 (ಶೇ.0.74)
ವಲಸೆ/ಸ್ಥಳಾಂತರಗೊಂಡ ಮತದಾರರು: 37,948
ಗೈರು ಮತದಾರರು: 9,712
ಸ್ಥಳಾಂತರಗೊಂಡ ಮತದಾರರು: 18,776
ಮರಣ ಹೊಂದಿದ ಮತದಾರರು: 5,587
ದ್ವಿಮತದಾರರು: 3,490
ಇತರೆ: 383
ಕೆಜಿಎಫ್ ಕ್ಷೇತ್ರದಲ್ಲಿ 224 ಮತಗಟ್ಟೆಗಳು
ಕೆಜಿಎಫ್ (ಎಸ್‌ಸಿ) ವಿಧಾನಸಭಾ ಕ್ಷೇತ್ರ ಸಂಖ್ಯೆ 146ರಲ್ಲಿ ಪ್ರಸ್ತುತ 221 ಮತಗಟ್ಟೆಗಳಿದ್ದು, ಹೊಸದಾಗಿ 3 ಮತಗಟ್ಟೆಗಳನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 224ಕ್ಕೆ ಏರಿಕೆಯಾಗಲಿದೆ. 2 ಕಿ.ಮೀ.ಗಿಂತ ಹೆಚ್ಚಿನ ಅಂತರದ ಮಾನದಂಡದಿಂದ ಯಾವುದೇ ಮತಗಟ್ಟೆ ಬದಲಾವಣೆ ಅಗತ್ಯವಿಲ್ಲ. ಕಟ್ಟಡ ಸ್ಥಳಾಂತರ ಹಾಗೂ ನಾಮಕರಣ ಬದಲಾವಣೆಯೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ವರ್ಗದ ಮತದಾರರು
ಕ್ಷೇತ್ರದಲ್ಲಿ 1,926 ಯುವ ಮತದಾರರು, 545 ಸೇವಾ ಮತದಾರರು, 2,142 ವಿಶೇಷ ಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 1,198 ಹಿರಿಯ ನಾಗರಿಕ ಮತದಾರರು ಇದ್ದಾರೆ.
ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಅರ್ಹ ನಾಗರಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ತಕ್ಷಣವೇ ತಮ್ಮ ಬಿಎಲ್‌ಒ ಅವರನ್ನು ಸಂಪರ್ಕಿಸಿ ಫಾರಂ–6 ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವಂತೆ ಮತದಾರ ನೋಂದಣಿ ಇಲಾಖೆ  ಮನವಿ ಮಾಡಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್. ಗಾಯತ್ರಿ. ಇದ್ದರು