ಎಂಎಲ್ಎ, ಎಂಎಲ್ಸಿ, ಡಿಸಿ, ನೇತೃತ್ವದಲ್ಲಿ ನಗರಸಭೆ ಸದಸ್ಯರ ಕುಂದುಕೊರತೆಗಳ ಸಭೆ

ಎಂಎಲ್ಎ, ಎಂಎಲ್ಸಿ, ಡಿಸಿ, ನೇತೃತ್ವದಲ್ಲಿ ನಗರಸಭೆ ಸದಸ್ಯರ ಕುಂದುಕೊರತೆಗಳ ಸಭೆ

ನಗರಸಭೆಯ ಅಭಿವೃದ್ಧಿಗೆ ಮಾಹಿತಿ ಕೊಡಿ ಕೆಲಸ ಮಾಡಿಸುವ ಜವಾಬ್ದಾರಿ ನಮಗೆ ಬಿಡಿ:ಕೊತ್ತೂರು ಮಂಜುನಾಥ್

 : ನಗರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಹಾಗೂ ಕಾಮಗಾರಿ ಬಗ್ಗೆ ಮಾಹಿತಿ ಕೊಡಿ ನಗರಸಭೆ ಕಮಿಷನರ್ ಕೈಯಲ್ಲಿ ಕೆಲಸ ಮಾಡಿಸುವ ಜವಾಬ್ದಾರಿ ನಮಗೆ ಬಿಡಿ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ನಗರಸಭೆ ಸದಸ್ಯರಿಗೆ ಹೇಳಿದರು.

ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಂಗಳವಾರ ನಗರಸಭೆಗೆ ಸಂಬಂಧಿಸಿದ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರದೇ ಇಲಾಖೆ ನಗರಸಭೆ ರಾಜ್ಯ ಸರಕಾರವು ಈಗಾಗಲೇ ಅನುದಾನವು ಬಿಡುಗಡೆ ಮಾಡಿದೆ ಇನ್ನೂ ಬೇಕಾದರೂ ಹಣ ಕೊಡಲು ಸರಕಾರ ಸಿದ್ದವಿದೆ ನಿಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಯಾವ ಕೆಲಸಗಳು ಆಗಬೇಕಾಗಿದೆ ಎಲ್ಲಿ ಆಗಬೇಕು ಎಂಬುದನ್ನು ಪಟ್ಟಿ ಮಾಡಿ ಕೂಡಲೇ ಕೆಲಸವನ್ನು ಮಾಡಿಸುತ್ತೇವೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಬೇಕು ಜಿಲ್ಲಾಧಿಕಾರಿಗಳ ಟಾಸ್ಕ್ ಫೋರ್ಸ್ ನಲ್ಲಿ ಅನುದಾನ ಇದೆ ನಗರಸಭೆ ಜನರ ಆಸ್ತಿಯಾಗಿದೆ ಜನ ದಿನನಿತ್ಯ ನಗರಸಭೆಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬರುತ್ತಾರೆ ಅವರಿಗೆ ಪರಿಹಾರ ನೀಡುವುದು ಕೂಡ ಅಧಿಕಾರಿಗಳ ಜವಾಬ್ದಾರಿ ನಗರಸಭೆಯಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಒಂದೊಂದಾಗಿ ಪರಿಹಾರಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಮಾತನಾಡಿ ಅಧಿಕಾರಿಗಳಿಗೆ ನಾವು ಚುನಾವಣೆಯಲ್ಲಿ ಆಯ್ಕೆಯಾದ ನಗರಸಭೆ ಸದಸ್ಯರು ಎಂಬ ಕನಿಷ್ಠ ಗೌರವವಿಲ್ಲ ಸರಿಯಾದ ಮಾಹಿತಿ ಕೊಡಲ್ಲ ದಳ್ಳಾಳಿಗಳಿಗೆ ಇರುವ ಗೌರವ ನಮಗಿಲ್ಲ ವಿನಾಕಾರಣ ಸದಸ್ಯರ ಬಗ್ಗೆ ಆರೋಪಗಳನ್ನು ಮಾಡತ್ತಾರೆ ಇವತ್ತು 35 ಜನ ನಗರಸಭೆ ಸದಸ್ಯರು ಇದ್ದಾರೆ ನೇರವಾಗಿ ಹೇಳಲಿ ಸದಸ್ಯರ ಮೇಲೆ ಗೂಬೆ ಕೂರಿಸುತ್ತಾರೆ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಇಲ್ಲ ಜನರಿಂದ ವೋಟ್ ಹಾಕಿಸಿಕೊಂಡ ತಪ್ಪಿಗೆ ಜನರು  ನಮ್ಮನ್ನು ಕೆಟ್ಟದಾಗಿ ಬೈಕೊಂಡು ಹೋಗತ್ತಾರೆ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಕೊತ್ತೂರು ಮಂಜುನಾಥ್ ನಗರಸಭೆ ಸದಸ್ಯರನ್ನು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬುದನ್ನು ಬಿಟ್ಟು ಅವರು ಕೇಳಿದಾಗ ಸ್ಪಂದಿಸುವುದು ಅಧಿಕಾರಿ ವರ್ಗದವರ ಜವಾಬ್ದಾರಿ ಹಿಂದೆ ಏನು ಆಗಿದೆ ಅದನ್ನು ಬಿಟ್ಟು ಬಿಡೋಣ ಮುಂದೆ ಆಗದಂತೆ ಎಚ್ಚರಿಕೆ ವಹಿಸೋಣ ನಗರಸಭೆಯನ್ನು ಮಂದೆ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲು ಸರಕಾರ ಕಾರ್ಯ ಯೋಜನೆ ರೂಪಿಸಲಾಗುತ್ತಾ ಇದೆ ನೂತನ ಕಟ್ಟಡವನ್ನು ಪಾಲಿಕೆಗೆ ಪೂರಕವಾಗಿ ಆದಷ್ಟು ಬೇಗ ನಿರ್ಮಿಸಲಾಗುತ್ತದೆ ನಿಮ್ಮಲ್ಲಿ ನಾಲ್ಕು ಜನರ ತಂಡ ಮಾಡಿ ಕಟ್ಟಡದ ಪ್ರತಿಯೊಂದು ಹಂತದಲ್ಲಿ ಪರಿಶೀಲನೆ ಮಾಡಿಸಲಾಗುತ್ತದೆ ಕಟ್ಟಡವು ಗುಣಮಟ್ಟದೊಂದಿಗೆ ಮಾದರಿ ಕಟ್ಟಡ ನಿರ್ಮಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಸಭೆ ಇದೆ ಎಂದು ಗೊತ್ತಿದ್ದರೂ ನಗರಸಭೆ ವ್ಯಾಪ್ತಿಯ ಕೆಲವು ಗುತ್ತಿಗೆದಾರರು ಸಭೆಗೆ ಬಂದಿಲ್ಲ ಎಂದು ಆಯುಕ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು ಕೂಡಲೇ ಆಯುಕ್ತರು ತಮ್ಮ ವ್ಯಾಪ್ತಿಯ ಗುತ್ತಿಗೆದಾರರನ್ನು ಕರೆಸಿ ಸಭೆ ಮಾಡಿ ಅವರಿಗೆ ಕಾಮಗಾರಿಗಳ ಬಗ್ಗೆ ಗಡುವು ನೀಡಬೇಕು ಇಂತಿಷ್ಟು ದಿನಗಳಲ್ಲಿ ಮುಗಿಸಬೇಕು ಎಂದು ಹೇಳಿ ಜೊತೆಗೆ ನಗರಸಭೆಯಲ್ಲಿನ ದಳ್ಳಾಳಿಗಳನ್ನು ದೂರವಿಟ್ಟರೆ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ನಗರಸಭೆಗೆ ಸಂಬಂಧಿಸಿದ ಯಾವುದೇ ಫೈಲ್‌ಗಳು ಬಂದರೂ ಕೂಡಲೇ ಪರಿಹಾರ ಮಾಡಿ ಕಳಸಲಾಗುತ್ತಾ ಇದೆ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಹಾರ ಮಾಡಲು ಕಛೇರಿಯ ಸಿಬ್ಬಂದಿ ಕೂಡ ಸಿದ್ದರಿದ್ದಾರೆ ಬೇಸಿಗೆ ಪ್ರಾರಂಭವಾಗುತ್ತಾ ಇದೆ ನೀರಿಗೆ  ಸಮಸ್ಯೆಯಾಗಬಾರದು ಕಸದ ನಿರ್ವಹಣೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು

ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ತಹಶಿಲ್ದಾರ್ ಹರ್ಷವರ್ಧನ್, ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.