ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ: ತಹಶೀಲ್ದಾರ್ ಗಾಯಿತ್ರಿ
ಕೆಜಿಎಫ್: ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಗಾಯಿತ್ರಿ ಸೂಚನೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರ್ಷ (ಪಿಒಪಿ ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ನಿಷೇಧವಿದ್ದು, ನಿಯಮ ಉಲ್ಲಂಘಿಸಿ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿದ್ದು, ಡಿಜೆ ಹಾಗೂ ಅತಿಯಾದ ಶಬ್ದ ಉಂಟುಮಾಡುವ ಸೌಂಡ್ ವ್ಯವಸ್ಥೆಗಳನ್ನು ಬಳಸಬಾರದು ಎಂದು ತಿಳಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಅನುಮತಿ ಪಡೆಯಲು ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಒಂದೇ ಸ್ಥಳದಲ್ಲಿ ಅಗತ್ಯ ಅನುಮತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಅನುಮತಿ ನೀಡುವ ಸಂದರ್ಭದಲ್ಲಿ ಸಂಘಟಕರ ಹಾಗೂ ಜವಾಬ್ದಾರಿಯುತ ಹಿರಿಯ ವ್ಯಕ್ತಿಗಳ ವಿವರಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹಬ್ಬದ ಆಚರಣೆ ಯಾವುದೇ ಸಮಸ್ಯೆಗೆ ಕಾರಣವಾಗದಂತೆ ಎಲ್ಲಾ ಸಂಘಟಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ, ಗಣೇಶ ಮೂರ್ತಿ ವಿಸರ್ಜನೆಗಾಗಿ ಪಾರಂಡಹಳ್ಳಿ ಕೆರೆಯಲ್ಲಿ ನಗರಸಭೆ ವತಿಯಿಂದ ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.
ಅದೇ ರೀತಿಯಾಗಿ ಪಂಚಾಯತಿ ಹಂತದಲ್ಲಿ ಅಧಿಕಾರಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು ಎಂದು ಸೂಚಿಸಿದರು.
ವಿಸರ್ಜನೆ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ, ಬೆಸ್ಕಾಂ ಅಧಿಕಾರಿಗಳು, ಆಂಬುಲೆನ್ಸ್ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಅನಿಲ್ ಕುಮಾರ್ ಮತ್ತು ಜಗದೀಶ್, ಆರೋಗ್ಯ ನಿರೀಕ್ಷಕಿ ಮಂಗಳಗೌರಿ, ಬೆಸ್ಕಾಂ ಅಧಿಕಾರಿ ಹೇಮಲತಾ ಹಾಗೂ ಅಗ್ನಿಶಾಮಕ ದಳ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.