ಜನಜೀವನದಲ್ಲಿ ಜಾಗೃತಿ ಮೂಡಿಸುವ; "ಸ್ವಪ್ನ ಸುಂದರಿ" 

ಜನಜೀವನದಲ್ಲಿ ಜಾಗೃತಿ ಮೂಡಿಸುವ; "ಸ್ವಪ್ನ ಸುಂದರಿ" 

     ಚದುರಂಗ ಅವರ ಕಥಾ ಸಂಕಲನ "ಸ್ವಪ್ನ ಸುಂದರಿ"ಯಲ್ಲಿನ ಒಂಬತ್ತು ಸಣ್ಣ ಕಥೆಗಳನ್ನು ಓದಿದೆ. 1948 ರಲ್ಲಿ ಪ್ರಕಟವಾದ ಈ ಕೃತಿ ಅವರ ಮೊದಲ ಕಥಾ ಸಂಕಲನವಾಗಿದೆ. 

ಪರಿಪೂರ್ಣ ಸೌಂದರ್ಯವನ್ನು ಕಲ್ಪನೆ ಮಾಡಿಕೊಂಡು ಜಮಾನ ಸಾಹೇಬನ ಮಗಳು ಖುರ್ಷಿದಳಲ್ಲಿ ವಿಭ್ರಾಂತನಾದ ಯಾಲಕ್ಕಿಯ ಆವೇಗ; ನಾನು ತಾನೆಂದು ಮುಂದುವರಿದು ಬಂದ ತರುಣರನ್ನು ಒಪ್ಪದೇ ನಿಗರ್ವಿ ಕೃಷ್ಣಸ್ವಾಮಿಯ ಮೇಲೆ ಮೋಹಿತಳಾದ ಅಪರಂಜಿಯ ಚಿತ್ರ; ಒಂದು ಗುಲಾಬಿಯ ಸ್ನಿಗ್ದ ಸೌಂದರ್ಯವನ್ನು ಅನುಭವಿಸಲು ಸಾಮಾಜಿಕ ಕಟ್ಟು ಕಟ್ಟಳೆಗಳಿಂದ ಹೊರಗುಳಿದ ಮಾಲೀಯ ಹೆಂಡತಿ; 1967 ರಲ್ಲಿ ಅರಸರಿಗೆ ಒದಗುವ ಪಾಠ; ತುಲಸಿಯ ಮೇಲಿನ ಅನುರಾಗದಿಂದ ಅವಳ ದೇಹ ವಿಕ್ರಯಕ್ಕೆ ಸಮ್ಮತಿಸುವ ಬುಡನ್ ಸಾಬಿಯ ಅಂತರಂಗದ ವಿಶ್ಲೇಷಣೆ; ನಾಯಿಗಳ ಮೂಲಕ ಉಳ್ಳವರು ಪಡೆಯುತ್ತಿರುವ ಸೌಲಭ್ಯಗಳು ಬಡವರಿಗೆ ಸಿಗದೇ ಹೋಗುವುದರ ಮೂರು ಮತ್ತೊಂದು; ತನ್ನ ಪೌರುಷ ಪ್ರದರ್ಶನಕ್ಕೆ ಕೆಂಪು ಶಾಹಿಯನ್ನು ಬಳಸಿದ ನಾರಾಯಣ, ತನ್ನ ಹೆಂಡತಿ ಲಕ್ಷ್ಮಿಯ ಮನಸ್ಸಿಗೆ ಮಾಡಿದ ಆಘಾತ; ಮಗ ಕೃಷ್ಣ ಚಳುವಳಿ ಸೇರಿ ಪೊಲೀಸರ ಗುಂಡಿನ ಹೊಡೆತಕ್ಕೆ ತುತ್ತಾದ ದೃಶ್ಯವನ್ನು ಕಂಡ ಭೈರೋಜಿಯ ಹೃದಯ ವೇದನೆ; ಅರ್ಚಕನಿಂದ ಮಕ್ಕಳ ವರ ಪಡೆದ ರತ್ನಮ್ಮನ ಅನುಭವ; ಇಲ್ಲಿನ ಕಥೆಗಳಲ್ಲಿ ಚಿತ್ರಿತವಾಗಿವೆ. 

ಇಂದು ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದು ಸತ್ಯವಾಗಿದೆ. ನಗರ, ಪಟ್ಟಣಗಳ ಆಧುನಿಕರಣಕ್ಕೆ ಬೆರಗಾಗಿ ಅಲ್ಲಿನ ಮೋಹಕ್ಕೆ ಒಳಗಾಗಿ ತಮ್ಮ ಹೆಣ್ಣು ಮಕ್ಕಳನ್ನು ಪಟ್ಟಣಗಳಲ್ಲಿ ನಗರಗಳಲ್ಲಿ ವಾಸಿಸುವ ಜನರಿಗೆ ಕೊಡುತ್ತಿರುವುದು ನಡೆದಿದೆ. ನಗರ ಪಟ್ಟಣಗಳಲ್ಲಿನ ವ್ಯವಸ್ಥೆಗಳು ರೂಢಿಗಳು ಹಳ್ಳಿಗಳಲ್ಲೂ ನೆಲೆಯೂರುತ್ತಿವೆ. ಬದಲಾವಣೆಯನ್ನು ಕಾಣುತ್ತಿರುವುದರಿಂದ ಹಳ್ಳಿಗಳಲ್ಲಿ ದುಡಿಯುವ ರೈತರ ಮಕ್ಕಳಿಗೂ ಹೆಣ್ಣು ಕೊಡಬಹುದು, ಆದರೆ ಇಂದಿಗೂ ಹೆಣ್ಣು ಹೆತ್ತವರ ಮನದಲ್ಲಿ ಸಂದೇಹದ ಗಾಳಿ ಬೀಸುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ವಿವಾಹವಾಗುವ ವಧು ಬರುವ ವರಗಳನ್ನು ಸಣ್ಣ ಸಣ್ಣ ಕಾರಣಗಳಿಂದ ತಿರಸ್ಕರಿಸುವ, ಅದೇ ರೀತಿ ವರನು ವಧುಗಳನ್ನು ತಿರಸ್ಕರಿಸುತ್ತ ಮದುವೆಯ ವಯಸ್ಸನ್ನು ಮೀರಿ ಹೋದ ನಂತರ ವಿವಾಹಕ್ಕೆ ಹೆಣ್ಣು ಗಂಡು ಹುಡುಕಾಟ ನಡೆಸುವುದನ್ನು ನಾವು ಇತ್ತೀಚೆಗೆ ಕಾಣುತ್ತಿದ್ದೇವೆ. ಇಂತಹ ನೈಜ ಚಿತ್ರಣವನ್ನು "ಅವರು" ಕಥೆಯಲ್ಲಿ ಚದುರಂಗ ರವರು ಚಿತ್ರಿಸಿದ್ದಾರೆ.

 ಶ್ರೀಮಂತರ ತೋಟದಲ್ಲಿ ಅರಳಿದ ಗುಲಾಬಿಯ ಸೌಂದರ್ಯ ಮತ್ತು ಪರಿಮಳ ಅದನ್ನು ಬೆಳೆಸಿದ ಮಾಲಿಯ ಹೆಂಡತಿಗೆ ಎಂದಿಗೂ ದಕ್ಕುವುದಿಲ್ಲ. ಈ ಮೂಲಕ ಬಂಡವಾಳ ಶಾಹಿ ಮತ್ತು ಕೂಲಿ ಕಾರ್ಮಿಕರ ಅಂತರವನ್ನ ಈ ಕಥೆ ತಿಳಿಸುತ್ತದೆ. 

1947 ರಲ್ಲಿ ಇದ್ದಂತೆ ವ್ಯವಸ್ಥೆ 1967 ರಲ್ಲಿ ಇಲ್ಲ ಎಂಬುದನ್ನು 1967 ರ ಕಥೆ ತಿಳಿಸುತ್ತದೆ. ಬಡವರ ಹೆಣ್ಣು ಮಕ್ಕಳು ಕಂಡ ಕಂಡವರ ಹೆಣ್ಣುಗಳು ಅರಸರಿಗೆ ಧಕ್ಕುವುದಿಲ್ಲ. ಪ್ರಜೆಗಳು ಒಳಿತು ಕೆಡುಕುಗಳ ಮತ್ತು ಗುಲಾಮತನವನ್ನು ತಿಳಿದುಕೊಂಡಿದ್ದಾರೆ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಎಲ್ಲರೂ ಸಿಡಿದು ನಿಲ್ಲುತ್ತಾರೆ ಎಂಬುದನ್ನು ಈ ಕಥೆ ನಮಗೆ ತಿಳಿಸುತ್ತದೆ. 

ಮನುಷ್ಯನ ಬದುಕಿನಲ್ಲಿ ಆರ್ಥಿಕತೆ ಎಷ್ಟು ಮುಖ್ಯ ಎಂಬುದನ್ನು ತುಲಸಿ ಕಥೆ ತಿಳಿಸುತ್ತದೆ. ಸ್ವಾಭಿಮಾನ ನಂಬಿಕೆ ಪಾಠದ ಅರಿಯವನ್ನು ಈ ಕಥೆಯಲ್ಲಿ ನಾವು ಕಾಣಬಹುದು. ಕುಟುಂಬದ ನಿರ್ವಹಣೆಯಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಪರೋಕ್ಷವಾಗಿ ಈ ಕಥೆ ನಮಗೆ ತಿಳಿಸುತ್ತದೆ. 

ಕೆಲವೊಮ್ಮೆ ಸುಳ್ಳು ಹೇಳಿ ಕಲ್ಯಾಣ ಮಾಡುವ, ಕೊನೆಗೆ ಇವುಗಳು ಮುರಿದು ಬೀಳುವ ಸಂದರ್ಭವನ್ನು ನಾವು ಕಾಣುತ್ತಿದ್ದೇವೆ. ಹೊಂದಾಣಿಕೆಯಾಗದೆ ಸಂಸಾರಗಳಲ್ಲಿ ಬಿರುಕು ಉಂಟಾಗುತ್ತಿರುವುದನ್ನು ಮತ್ತು ವಿಚ್ಛೇದನಗಳು ಹೆಚ್ಚಾಗುತ್ತಿರುವುದನ್ನು ನಾವು ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಇವುಗಳಿಗೆ ತಿಳುವಳಿಕೆಯ ಅವಶ್ಯಕತೆ ಬೇಕಾಗಿದೆ ಎಂಬುದನ್ನು "ಕೆಂಪುಶಾಹಿ" ಕತೆ ನಮಗೆ ತಿಳಿಸಿಕೊಡುತ್ತದೆ. 

ಚದುರಂಗ ರವರು ಅಂದು ಬರೆದ "ಪ್ರಜಾ ಹೋರಾಟ" ಕಥೆ ಇಂದಿಗೂ ಪ್ರಸ್ತುತ ಚಿತ್ರಣವಾಗಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಜವಾಬ್ದಾರಿ ಸರ್ಕಾರ ಬೇಕೆಂದು ಹೋರಾಟ ನಡೆಸುವ ವಿದ್ಯಾರ್ಥಿಗಳ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡುವ ಮೂಲಕ ಮಕ್ಕಳನ್ನು ಶಿಕ್ಷಿಸುವುದನ್ನು ಸ್ವತಃ ಪೊಲೀಸ್ ಆದ ಬೈರೋಜಿ ಖಂಡಿಸಿರುವುದನ್ನು, ತನ್ನ ಮಗನನ್ನು ಕಳೆದುಕೊಳ್ಳುವುದನ್ನು ಈ ಕಥೆ ಚಿತ್ರಿಸುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಹೋರಾಟವನ್ನು ಈ ಕಥೆ ನೆನಪಿಸುತ್ತದೆ.

 ಮೌಡ್ಯತೆಯೊಳಗೆ ಮನುಷ್ಯರು ಇನ್ನೂ ಒದ್ದಾಡುತ್ತಿದ್ದಾರೆ.ಮಕ್ಕಳಿಲ್ಲದವರು ದೇವರ ಮೊರೆ ಹೋಗುತ್ತಿರುವುದು, ಈ ಮೂಲಕ ಅರ್ಚಕರು ಬಳಸಿಕೊಳ್ಳುತ್ತಿರುವುದು ಸದ್ದಿಲ್ಲದೆ ನಡೆಯುತ್ತಿದೆ. ಜಾಗೃತಿ ಮತ್ತು ಶಿಕ್ಷಣದ ಅವಶ್ಯಕತೆಯಿಂದಲೇ ಮೌಡ್ಯ ವಿರುದ್ಧ ಎದ್ದು ನಿಲ್ಲಲು ಸಾಧ್ಯವಾಗುತ್ತದೆ ಎಂಬುದನ್ನು "ನನ್ನ ಮಗು" ಕಥೆ ತಿಳಿಸುತ್ತದೆ. 

ಒಬ್ಬರಿಗೊಬ್ಬರು ಆಕರ್ಷಣೆಯಾಗುವ ವಿಚಾರದಲ್ಲಿ ಹೆಣ್ಣು ಮತ್ತು ಗಂಡು ಹುಡುಕಾಟದಲ್ಲಿ ಸೌಂದರ್ಯ, ಗುಣ, ನಡವಳಿಕೆ, ಕಣ್ಣು, ನಡು, ಎದೆ, ಮೈಮಾಟ, ಸರಳತೆ ಇವುಗಳಲ್ಲಿ ಯಾವುದಾದರೂ ಒಂದು ಮುಖ್ಯವಾಗುತ್ತವೆ. ಈ ಮೂಲಕ ಪ್ರೀತಿ ಪ್ರೇಮ ಬೆಳೆಯಲಾರಂಭಿಸುತ್ತದೆ ಎಂಬುದು ಸತ್ಯ. ಇದರ ಆಚೆಗೆ ಹೆಣ್ಣು ಗಂಡಿನಲ್ಲಿ, ಗಂಡು ಹೆಣ್ಣಿನಲ್ಲಿ ನಡೆಸುವ ಹುಡುಕಾಟದಲ್ಲಿ ಕೊನೆಗೆ ಹುಟ್ಟುವುದೇ ಪ್ರೀತಿ ಎಂಬುದನ್ನು ಸ್ವಪ್ನ ಸುಂದರಿ ಕಥೆ ತಿಳಿಸುತ್ತದೆ. 

ಒಟ್ಟಾರೆ ಚದುರಂಗರು ಬರೆದಿರುವ ಇಲ್ಲಿನ ಕಥೆಗಳು ವಾಸ್ತವಕ್ಕೆ ಹತ್ತಿರವಾಗಿವೆ. ಕೆಲವು ಸರ್ವಕಾಲಿಕ ಸತ್ಯವಾಗಿರುವುದನ್ನು ನಾವು ಕಾಣಬಹುದಾಗಿದೆ. ದೇಹ ವಿಕ್ರಯ ಮಾಡುವ ಹೆಂಗಸರ, ಪೌರುಷ ಹೀನರಾದ ಪುರುಷರ, ಹೆಣ್ಣಿನ ರೂಪ ವರ್ಣನೆಯ ಬಗ್ಗೆ ಚದುರಂಗರು ಮುಚ್ಚುಮರೆ ಇಲ್ಲದೆ ಬರೆದಿದ್ದಾರೆ. ಓದುಗನಲ್ಲಿ ಈ ಕಥೆಗಳು ಕುತೂಹಲವನ್ನು ಹುಟ್ಟಿಸುತ್ತವೆ. ಇಲ್ಲಿನ ಕಥೆಗಳಲ್ಲಿ ವೈವಿಧ್ಯ ವಿಸ್ತಾರಗಳನ್ನು ಓದುಗನು ನಿರೀಕ್ಷಿಸಬಹುದಾಗಿದೆ. ಇಷ್ಟು ಸ್ವಾರಸ್ಯವಾದ ಕಥಾಸಂಕಲನ ನಮಗೆ ನೀಡಿರುವ ಚದುರಂಗರು ಅಭಿನಂದನಾರ್ಹರು.

ಉದಂತ ಶಿವಕುಮಾರ್
ಲೇಖಕರು. ಬೆಂಗಳೂರು-56
ಮೊ: 9739758558