ಶೋಷಿತ ವರ್ಗಗಳ ಸಂಕಟಗಳನ್ನು ಚಿತ್ರಿಸುವ; 'ಶವದ ಮನೆ'

ಶೋಷಿತ ವರ್ಗಗಳ ಸಂಕಟಗಳನ್ನು ಚಿತ್ರಿಸುವ; 'ಶವದ ಮನೆ'
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಚದುರಂಗರವರು ಬರೆದ ಎರಡನೇ ಕಥಾಸಂಕಲನ "ಶವದ ಮನೆ" ಓದಿದೆ. ಈ ಕಥಾಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ. 1950 ರಲ್ಲಿ ಮೊದಲ ಮುದ್ರಣ ಕಂಡಿದೆ. 

"ಶವದ ಮನೆ" ಎಂಬ ಕತೆಯ ಮೂಲಕ ಸಮಾಜದ ಶೋಷಿತ ವರ್ಗಗಳ ಹಲವು ಮುಖಗಳನ್ನು ಪ್ರದರ್ಶಿಸುವುದರೊಡನೆ ಒಂದಕ್ಕು ಮೀರಿದ ಕಥಾ ಸನ್ನಿವೇಶಗಳನ್ನು ಅನುಭವ ವಿಶೇಷಗಳನ್ನು ಏಕತ್ರ ಅಭಿವ್ಯಕ್ತಿಸುತ್ತಾ ಕಥೆಯ ಚೌಕಟ್ಟನ್ನು ಹಿಗ್ಗಿಸಿಕೊಳ್ಳುವ ಸಾಹಸವನ್ನು ಈ ಕಥೆ ಪ್ರದರ್ಶಿಸುತ್ತದೆ.

 ಗೆಳೆತನದಲ್ಲಿಯೂ ಆಟವಾಡಲಾಗಲೀ ಶಾಲೆಯಲ್ಲಿ ಕಲಿಯಲಾಗಲೀ ಅವಕಾಶ ಕೊಡದೆ ಹುಡುಗನೊಬ್ಬನನ್ನು ಆ ವಯಸ್ಸಿನಲ್ಲಿಯೇ ದುಡಿತದಲ್ಲಿ ತೊಡಗಿಸುವ ನಮ್ಮಲ್ಲಿ ಬಹುತೇಕ ಜನರನ್ನು ಕಾಡುವ ಬಡತನ. ಅವರ "ತೂ ಚಿಪ್ ತು ದಾಂಡ್ ತು ಬದ್- ರೆಡೀ" ಎಂಬ ಕತೆಯಲ್ಲಿ ಹೃದಯ ವೇದಕವಾಗಿ ಚಿತ್ರಿಸಿರುವುದನ್ನು ನಾವು ಕಾಣಬಹುದು. 

ಆಸ್ತಿಗಾಗಿ, ಹಣಕ್ಕಾಗಿ ಹಿಂದಿನ ಕಾಲದಿಂದಲೂ ಕೊಲೆಗಳು, ಯುದ್ಧಗಳು ನಡೆದು ಬರುತ್ತಿವೆ. ಇದಕ್ಕೆ ಕಾರಣ ದುರಾಸೆ. ಬುದ್ಧ ಬಂದು ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದರೂ ಕೆಲವು ಮನುಷ್ಯರಲ್ಲಿ ಕ್ರೂರತ್ವವನ್ನು ಬಿಡಲಾಗುತ್ತಿಲ್ಲ. ಹೆಣ್ಣು, ಹೊನ್ನು, ಮಣ್ಣಿಗಾಗಿ ಈ ಜಗತ್ತಿನಲ್ಲಿ ಪ್ರತಿದಿನ, ಪ್ರತಿ ಕ್ಷಣ ಕೆಲವು ಕಡೆ ಮೋಸಗಳು ನಡೆಯುತ್ತಲೇ ಇವೆ. ಶ್ರಮವಿಲ್ಲದ ಬದುಕನ್ನು ಸಾಗಿಸಲು ಇಂತಹ ಅಡ್ಡದಾರಿಯಲ್ಲಿ ಸಾಗುತ್ತಿರುವವರು ಈ ಭೂಮಿಯ ಮೇಲೆ ಹೆಚ್ಚುತ್ತಿದ್ದಾರೆ. ಇಲ್ಲಿ ಸಂಬಂಧಗಳಿಗೆ ಬೆಲೆ ಇರುವುದಿಲ್ಲ ಎಂಬುದನ್ನು "ನಿಟ್ಟುಸಿರು" ಕಥೆ ತಿಳಿಸುತ್ತದೆ. ಅಣ್ಣನು, ತಮ್ಮನ ಜಮೀನನ್ನು ಕಬಳಿಸಲು ತಮ್ಮನ ಒಬ್ಬನೇ ಮಗ ಆದಿಯನ್ನು ಕೊಲ್ಲುವ ಕನಸನ್ನು ಕನಸು ಕಾಣುವುದನ್ನು ಈ ಕಥೆಯಲ್ಲಿ ನಾವು ಕಾಣಬಹುದಾಗಿದೆ. 

ಈ ಜಗತ್ತಿನಲ್ಲಿ ಪ್ರಕೃತಿಯನ್ನು ಬಿಟ್ಟರೆ ತಾಯಿಯೇ ದೇವರಿಗೆ ಸಮಾನವಾದವಳು. ಮಕ್ಕಳಿಗೋಸ್ಕರ ತಾಯಿಯ ಶ್ರಮ, ಹೋರಾಟ ನಿರೀಕ್ಷೆಗೂ ಮೀರಿರುವಂತದ್ದು. ಮಕ್ಕಳಿಗೆ ತಂದೆ ಇಲ್ಲದಿದ್ದರೂ ತಾಯಿ ಇರಬೇಕು. ಸಕಲ ಜೀವಿಗಳಲ್ಲೂ ತಾಯಿಯ ಪಾತ್ರ ಮುಖ್ಯವಾಗಿರುತ್ತದೆ. ಎಂಬುದನ್ನು "ಇಪ್ಪತ್ತು ರೂಪಾಯಿ" ಕಥೆ ತಿಳಿಸುತ್ತದೆ. 

ತಂದೆ ತಾಯಿಯ ಮುಂದೆಯೇ ಬದುಕಿ ಬಾಳಬೇಕಾದ ಮಕ್ಕಳು ಸತ್ತು ಹೋಗುವುದು. ಮಗಳು ವಿಧವೆಯಾಗುವುದು ಸಹಿಸಲಾರದ ಸಂಕಟವೇ ಸರಿ. ಈ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಗಂಡನನ್ನು ಕಳೆದುಕೊಂಡು ವಿಧವೆಯಾಗುವ ಸನ್ನಿವೇಶದಲ್ಲಿ ಮುತ್ತೈದೆಗೆ ಇರಬೇಕಾದ ಸಂಸ್ಕಾರಗಳೆಲ್ಲ ಶೂನ್ಯಗೊಳಿಸುವ ಪರಿ ನಿಜಕ್ಕೂ ಬೇಸರ ತರುತ್ತದೆ. ಇದನ್ನು ಕಂಡು ಸಮಾಜ ಸುಧಾರಣೆಯಲ್ಲಿ ರಾಜಾರಾಮ್ ಮೋಹನ್ ರಾಯ್, ಸ್ವಾಮಿ ದಯಾನಂದ ಸರಸ್ವತಿ ಇಂತಹ ಅನೇಕ ಸುಧಾರಕರು ಹೆಣ್ಣಿನ ಬಗ್ಗೆ ಚಿಂತಿಸಿ ವಿಧವಾ ವಿವಾಹ ಪದ್ಧತಿ ತಂದದ್ದು ಮರೆಯಲಾಗುವುದಿಲ್ಲ. ಇಂತಹ ಹೆಣ್ಣು ಮಕ್ಕಳು ಮೊದಲಿಗೆ ಕುಟುಂಬ ಮತ್ತು ಸಂಬಂಧಿಕರಿಂದಲೇ ತಿರಸ್ಕೃತವರಾಗುವುದು ಬೇಸರದ ಸಂಗತಿಯಾಗಿದೆ. ಇಂಥ ಚಿತ್ರಣವನ್ನು "ಬಳೆ ಬೇಕೆ ಬಳೇ" ಕಥೆಯಲ್ಲಿ ನಾವು ಕಾಣಬಹುದು. 

ವಯಸ್ಸಿಗೆ ಅಂದರೆ ಯವೌನಕ್ಕೆ ಬಂದ ಹೆಣ್ಣು ಅಥವಾ ಗಂಡು ಪರಸ್ಪರ ಆಕರ್ಷಣೆಗೆ ಒಳಗಾಗುವುದು ಪ್ರಕೃತಿ ಸಹಜಕ್ರಿಯೆ. ಹಿರಿಯರಾದವರು ಇದರ ಬಗ್ಗೆ ಕಾಳಜಿ ವಹಿಸಬೇಕಾದದ್ದು ಕರ್ತವ್ಯ. ರೂಪಕ್ಕೆ, ಸೌಂದರ್ಯಕ್ಕೆ ಮರುಳಾಗದವರಾರು. ಕಠಿಣ ತಪಸ್ವಿ ವಿಶ್ವಾಮಿತ್ರನೇ ಮೇನಕೆಯ ಮೋಹಕ್ಕೆ ಒಳಗಾದನಲ್ಲವೆ ಎಂಬುದನ್ನು ನಾವು ಪುರಾಣದಲ್ಲಿ ಓದಿದ್ದೇವೆ. ಎಲ್ಲರಿಗೂ ಪ್ರಿಯವಾದ ಸುಮತಿ, ನಾಗಯ್ಯನ ಮಗನ ಮೋಹಕ್ಕೆ ಸಿಲುಕಿ ಗರ್ಭಿಣಿಯಾಗಿ ಬಾವಿಯಲ್ಲಿ ಬಿದ್ದು ಸಾಯುವ ಸನ್ನಿವೇಶ ದುಃಖ ತರುತ್ತದೆ. ಹಿರಿಯರ ಎಚ್ಚರಿಕೆ ಇಲ್ಲಿ ಮುಖ್ಯವಾಗಿರಬೇಕು ಎಂಬುದನ್ನು "ನಾಲ್ಕು ಮನೆಯ ನಂದಾದೀಪ" ಕಥೆ ನಮ್ಮ ಅರಿವಿಗೆ ತರುತ್ತದೆ. 

ಹೆಣ್ಣು ವೇಶ್ಯಾವೃತ್ತಿಗೆ ದೂಡಿದ ಈ ಸಮಾಜದ ದೊಡ್ಡ ಮನುಷ್ಯರು, ಕೊನೆಗಾಲಕ್ಕೆ ಆಕೆಯ ಸಹಾಯಕ್ಕೆ ಯಾರು ಬರುವುದಿಲ್ಲ ಎಂಬುದನ್ನು "ಸಯ್ಯಾಜಿರಾವ್ ರಸ್ತೆ" ಕಥೆ ತಿಳಿಸುತ್ತದೆ. ಹಣೆಬರಹ ಎಂಬುದಕ್ಕಿಂತ ಹಣಬರಹ ಮುಖ್ಯವಾಗಿ ಈ ಸಮಾಜದಲ್ಲಿ ಎಲ್ಲವನ್ನು ನಿಭಾಯಿಸುತ್ತದೆ ಎಂಬುದನ್ನು ಪರೋಕ್ಷವಾಗಿ ತಿಳಿಯಬೇಕಾಗಿದೆ. 

ಸುಳ್ಳಿನ ಶೃಂಗಾರದ ಮುಂದೆ ಸತ್ಯ ಬೆತ್ತಲೆಯಾಗುತ್ತದೆ ಎಂದು ಹೇಳುತ್ತಾರೆ. ಸತ್ಯವನ್ನೇ ಹೇಳಲು ಮುಂದಾಗುವ ಲೇಖಕ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಸತ್ಯ ಹೇಳಿದರೆ ಈಗ ಬದುಕುವುದೇ ಕಷ್ಟ ಎನ್ನುವ ಸನ್ನಿವೇಶಕ್ಕೆ ಬರುತ್ತಾನೆ. ಇನ್ನೊಬ್ಬರನ್ನು ಮೆಚ್ಚಿಸಲು ಸುಳ್ಳು ಹೆಚ್ಚು ಅನುಕೂಲಕ್ಕೆ ಬರುವ ಕಾಲವಿದು ಎಂದು ನಂಬಲಾಗುತ್ತದೆ. ಆದರೆ ಕೊನೆಗೆ ಉಳಿಯುವುದೇ ಸತ್ಯ. ನಿಜದ ಸ್ವರೂಪ ಎಂಬುದನ್ನು "ಸತ್ಯ" ಕತೆ ತಿಳಿಸುತ್ತದೆ.

 ಕಾಳಿ ಕಥೆಯು ಹೆಣ್ಣಿನ ಸಂಕಟವನ್ನು ಬಿತ್ತರಿಸುತ್ತದೆ. ಒಟ್ಟಾರೆ ಇಲ್ಲಿನ ಕಥೆಗಳಲ್ಲಿ ಶೋಷಿತ ವರ್ಗಗಳ ಸಂಕಟಗಳನ್ನು ಚದುರಂಗರವರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಕಥನ ಕಲೆಯ ಪುನರುದ್ದಾರಕ್ಕೆ ಶ್ರಮಿಸಿದ್ದಾರೆ ಎಂದು ಹೇಳಬಹುದು. 

ಉದಂತ ಶಿವಕುಮಾರ್

ಲೇಖಕರು 

ಬೆಂಗಳೂರು-560056 

ಮೊಬೈಲ್ ನಂ: 9739758558