ಗಡಿನಾಡಿನಲ್ಲಿ ಕನ್ನಡ ಸಂಘದಿಂದ ನಾರಾಯಣ ಗುರು ಜಯಂತಿ ಸಂಭ್ರಮ
ಕೇರಳದಲ್ಲಿ ಜಾತಿ, ಮತ ಭೇದ, ಅಸ್ಪೃಶ್ಯತೆ ಆಚರಣೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಸಮಾಜದಲ್ಲಿ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದ ಸಂತ ನಾರಾಯಣ ಗುರು. ಸಂಸ್ಕ್ರತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದರು. ಜಾತಿಯನ್ನು ಕೇಳಬೇಡಿ, ಜಾತಿಯನ್ನು ಹೇಳಬೇಡಿ, ಜಾತಿಯನ್ನು ಮಾಡಬೇಡಿ. ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ ಎಂಬ ತತ್ವ ಸಾರಿದ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆಗೆ ತಿಳಿಯಪಡಿಸುವುದು, ಆ ಮೂಲಕ ಸುಸಂಸ್ಕೃತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಘದ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರ 244ನೇ ಕಾರ್ಯಕ್ರಮವಾಗಿ ನಾರಾಯಣ ಗುರು ಜಯಂತಿ ಆಚರಣೆ ಮತ್ತು ಸಾಹಿತ್ಯ ಗಾನ ನೃತ್ಯ ವೈಭವ 30 ಆಗಸ್ಟ್ 2026ರಂದು ಸಂಜೆ 5ಗಂಟೆಗೆ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನದ ಶಿವದುರ್ಗಾ ವೇದಿಕೆ ಚೂರಿಪ್ಪಳ್ಳ ನೆಲ್ಲಿಕಟ್ಟೆ ಇಲ್ಲಿ ಆಯೋಜಿಸಲಾಗಿತ್ತು. ಸಂಘದ ಕೋಶಾಧಿಕಾರಿ ಡಾ. ವೆಂಕಟಗಿರೀಶ್ ಮಾತನಾಡಿ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಂಘದ ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಕಾರ್ಯಕ್ರಮ ಆಯೋಜಿಸಲು ಮಾರ್ಗದರ್ಶನ ನೀಡಿ ಯಶಸ್ವಿಯಾಗಲು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಹಾಗೂ ಸ್ಥಳೀಯ ಕಲಾವಿದರಾದ ಆರಾಧ್ಯ ಶ್ರೇಯ ಬಾಲಕೃಷ್ಣ ಪ್ರಜ್ವಲ್ ಮುಂತಾದವರ ಉಪಸ್ಥಿತಿಯಲ್ಲಿ ಸಾಹಿತ್ಯ ಗಾನ ನೃತ್ಯ ಕಾರ್ಯಕ್ರಮಗಳು ಸಂಪನ್ನಗೊಂಡವು. ವೇದಿಕೆಯಲ್ಲಿ ಕಲಾವಿದರನ್ನು ಪುಸ್ತಕ ನೀಡಿ ಗೌರವಿಸಲಾಯಿತು.