ಗುಟ್ಟಹಳ್ಳಿ ಸಂತೆ ಹರಾಜು ಯಶಸ್ವಿ: ಹುಲ್ಕೂರು ಗ್ರಾಮ ಪಂಚಾಯಿತಿಗೆ 53 ಸಾವಿರ ಆದಾಯ
ಬೇತಮಂಗಲ: ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಟ್ಟಹಳ್ಳಿ (ಬಂಗಾರು ತಿರುಪತಿ) ಸಂತೆಗೆ ಸಂಬಂಧಿಸಿದ 2026-27ನೇ ಸಾಲಿನ ಹರಾಜು ಇಸ್ತಿಹಾರ್ ಯಶಸ್ವಿಯಾಗಿ ನಡೆಯಿತು. ಹರಾಜು ಪ್ರಕ್ರಿಯೆಯ ಮೂಲಕ ಗ್ರಾಮ ಪಂಚಾಯಿತಿಗೆ 53 ಸಾವಿರ ಆದಾಯ ಲಭಿಸಿತು.
ಎರಡು ವರ್ಷಗಳ ಅವಧಿಗೆ ತರಕಾರಿ, ಹೊಗೆಸೊಪ್ಪು, ಕಡ್ಡಿಪುಡಿ, ಹೂವಿನ ಅಂಗಡಿ, ಅಡಿಕೆ, ಮಿಠಾಯಿ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳ ಹಕ್ಕುಗಳನ್ನು ಬಹಿರಂಗ ಹರಾಜಿನ ಮೂಲಕ ನೀಡಲಾಯಿತು. ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಂತೆ ಹರಾಜಿನಿಂದ ಗ್ರಾಮ ಪಂಚಾಯಿತಿಗೆ 53 ಸಾವಿರ ಆದಾಯ ಬಂದಿದ್ದು, ಈ ಮೊತ್ತವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೃಷ್ಣಮೂರ್ತಿ, ಕರ ವಸೂಲಿಗಾರ ವೆಂಕಟರಾಮಪ್ಪ, ಕೃಷ್ಣಾರೆಡ್ಡಿ, ಆಂಜಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಪ್ಪ, ಬಜ್ಜಪ್ಪ, ಅಜಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.