ಕ್ಯಾಸಂಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿ ವಾರ್ಷಿಕ ಮಹಾಸಭೆ
ಬೇತಮಂಗಲ: ತಾಲೂಕಿನ ಕ್ಯಾಸಂಬಳ್ಳಿ ಕ್ಲಸ್ಟರ್ ವ್ಯಾಪ್ತಿಯ ಕ್ಯಾಸಂಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿ ನಿಯಮಿತ (FPO)ದ ವಾರ್ಷಿಕ ಮಹಾಸಭೆ ಸೋಮವಾರ ಕ್ಯಾಸಂಬಳ್ಳಿ ಗ್ರಾಮದಲ್ಲಿ ನಡೆಯಿತು.
ಕಂಪನಿಯ ವ್ಯವಸ್ಥಾಪಕಿ ಸೌಂದರ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೃಷಿ ಇಲಾಖೆ, ಕ್ಯಾಸಂಬಳ್ಳಿ ಹಾಗೂ ಸೆಹಗಲ್ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಕಂಪನಿಯ ವಿವಿಧ ಚಟುವಟಿಕೆಗಳು, ಪ್ರಸ್ತುತ ವಹಿವಾಟು ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಕಂಪನಿಯ ಅಧ್ಯಕ್ಷ ರಾಮಕೃಷ್ಣ ರೆಡ್ಡಿ ಮಾತನಾಡಿ, ಸಂಸ್ಥೆಯ ಪ್ರಸ್ತುತ ವಹಿವಾಟು, ಜಾನುವಾರುಗಳ ಮೇವಿನ ಘಟಕ, ಕುರಿ ಸಾಕಾಣಿಕೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಂಪನಿಯ ನಿರ್ದೇಶಕರು ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
FPO ವ್ಯವಸ್ಥಾಪಕಿ ಸೌಂದರ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ತರಿಸುವುದು, ಜಾನುವಾರುಗಳ ಮೇವಿನ ಘಟಕವನ್ನು ಅಭಿವೃದ್ಧಿಪಡಿಸುವುದು ಹಾಗೂ ಅದರ ಪ್ರಯೋಜನವನ್ನು ಎಲ್ಲಾ ಷೇರುದಾರ ರೈತರಿಗೆ ತಲುಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು. ಸೈಲೇಜ್ ಘಟಕ ಮತ್ತು ಕುರಿ ಸಾಕಾಣಿಕೆ ಯೋಜನೆಗಳನ್ನು ಸಹ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೆಹಗಲ್ ಸಂಸ್ಥೆಯ ಈಶ್ವರ್ ಎಂ. ಮಾತನಾಡಿ, ಸಂಸ್ಥೆಯ ವತಿಯಿಂದ ರೈತರಿಗೆ ನೀಡಲಾಗುತ್ತಿರುವ ವಿವಿಧ ಸೇವೆ, ಸೌಲಭ್ಯ ಹಾಗೂ ಪ್ರಯೋಜನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಷೇರುದಾರರನ್ನಾಗಿ ಸೇರಿಸುವ ಮೂಲಕ ಅವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬಹುದು ಎಂದು ಹೇಳಿದರು.
ಕೆಜಿಎಫ್ ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿರುವ ಪದಾಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಸೆಹಗಲ್ ಸಂಸ್ಥೆಯಿಂದ ರೈತರಿಗೆ ನೀಡಲಾಗುತ್ತಿರುವ ಕೃಷಿ ಔಷಧಿ ಮತ್ತು ರಸಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾವು ಬೆಳೆಯ ನಿರ್ವಹಣೆ ಹಾಗೂ ಉತ್ತಮ ಇಳುವರಿ ಪಡೆಯುವ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ BFTPL ಕಂಪನಿಯ ಮಾರಾಟ ಅಧಿಕಾರಿ ಗೋಪಾಲ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ರೈತರಿಗೆ ಕೃಷಿ ಚಟುವಟಿಕೆಗಳು, ಕುರಿ ಸಾಕಾಣಿಕೆ, ಕೋಲಾರದಲ್ಲಿ ಕೇಂದ್ರೀಕೃತ ಕೃಷಿ ಮಳಿಗೆ ಸ್ಥಾಪನೆ ಹಾಗೂ ಕಂಪನಿಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಕ್ಯಾಸಂಬಳ್ಳಿ ಕ್ಲಸ್ಟರ್ ವ್ಯಾಪ್ತಿಯ ನೂರಾರು ಷೇರುದಾರ ರೈತರು, ಮಹಿಳಾ ಸದಸ್ಯರು ಹಾಗೂ ಕಂಪನಿಯ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ, ಬಲರಾಮ ರೆಡ್ಡಿ, ಶ್ರೀರಾಮುಲು, ವೆಂಕಟರೆಡ್ಡಿ, ಮುನಿರಾಜು ಹಾಗೂ ಶಂಕರಪ್ಪ ಉಪಸ್ಥಿತರಿದ್ದರು.