ನಾಟಕಗಳು ಯುವಪೀಳಿಗೆಯನ್ನು ಎಚ್ಚರಿಸುತ್ತವೆ: ಡಾ. ಹೆಚ್. ತುಕಾರಾಂ
ಇತ್ತೀಚಿಗೆ ಬೆಂಗಳೂರಿನ ಕುವೆಂಪು ಭಾಷಾಭಾರತಿ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ನಡೆದ ಸಂಸ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಡಾ. ಹೆಚ್ ತುಕಾರಾಂ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ನಾಟಕಗಳು ಪಾತ್ರಗಳಿಗೆ ಜೀವವನ್ನು ತುಂಬುವ ಮೂಲಕ ಇಂದಿನ ಯುವ ಪೀಳಿಗೆಯನ್ನು ಮುಟ್ಟುವ ಮತ್ತು ಸಾಮಾಜಿಕ ಬದಲಾವಣೆಯಲ್ಲಿನ ಪ್ರಸ್ತುತ ತಲ್ಲಣಗಳನ್ನು ಅರ್ಥೈಸುವ ಬಹುಮುಖ್ಯ ಪ್ರಕಾರವಾಗಿದ್ದು ನಾಟಕವನ್ನು ಹೆಚ್ಚು ಹೆಚ್ಚು ಪ್ರದರ್ಶಿಸುವುದರ ಜೊತೆಗೆ ನೋಡುಗರ ಮನಮುಟ್ಟುವಂತೆ ಮಾಡಬೇಕಾಗಿರುವುದು ಇಂದಿನ ಯುವಪೀಳಿಗೆಯ ಕರ್ತವ್ಯವಾಗಿದೆ ಎಂದರು.
ದಮ್ಮಪ್ರಿಯ ಎಂ ಗಿರಿಯಪ್ಪನವರು ಮಾತನಾಡಿ, ಇಂದಿನ AI ಯುಗದಲ್ಲಿ, ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಮೂರೆ ಹೋಗಿದ್ದು, ನಾಟಕ ಸಂಸ್ಕೃತಿ ಎನ್ನುವುದೇ ಮಾಯವಾಗುತ್ತಾ ಮಂಟೇಸ್ವಾಮಿ ಮಲೆ ಮಹದೇಶ್ವರ ಕಾವ್ಯಗಳಂತಹ ದೊಡ್ಡ ಸಾಂಸ್ಕೃತಿಕ ನೆಲೆಯುಳ್ಳ ಚಳುವಳಿಗಳೆ ಮಾಯವಾಗುತ್ತಿದ್ದು ಇಂತಹವುಗಳನ್ನು ಮತ್ತೆ ಮರುಕಳಿಸಬೇಕಾದರೆ ನಾಟಕ ಪ್ರವೃತ್ತಿ ಎನ್ನುವುದು ಮುಂದುವರೆಯಬೇಕಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಡಾ. ಹೆಚ್ ಆರ್ ಸ್ವಾಮಿಯವರು ಮಾತನಾಡಿ ಪುಸ್ತಕ ಸಂಸ್ಕೃತಿ ಎನ್ನುವುದು ಮಾಯವಾಗುವುದರ ಜೊತೆಗೆ ಗುರು ಹಿರಿಯರ ಸಂಬಂಧಗಳು ಕಳಚಿದ ಕೊಂಡಿಗಳಾಗುತ್ತಿದ್ದು, ಇದರಿಂದ ನಾಟಕ ಸಂಸ್ಕೃತಿ ಎನ್ನುವುದು ಹೊರತೇನಾಗಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದಂತಹ ಕೂಡ್ಲೂರು ವೆಂಕಟಪ್ಪನವರು ನಾಟಕ ಪಾತ್ರಧಾರಿಗಳಿಗೆ ಶುಭ ಹಾರೈಸಿದರು. ಸಂಸ ನಾಟಕೊತ್ಸವದ ಮುಖ್ಯವಾರಿಗಳಾದ ಸಂಸ ಸುರೇಶ್ ರವರು ಹಾಜರಿದ್ದು ವೇದಿಕೆಯಲ್ಲ ಗಣ್ಯಾತಿ ಗಣ್ಯರನ್ನು , ನಾಟಕದ ಪಾತ್ರಧಾರಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ವಂದಿಸಿದರು. ನಿರ್ಮಲಾನಾದನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.