ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ಸೂಟ್ ವಿತರಣೆ
ಚಿತ್ರ 01: ಬೇತಮಂಗಲದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ಸೂಟ್ ವಿತರಿಸಲಾಯಿತು.
ಬೇತಮಂಗಲ: ಪಟ್ಟಣದ ಪಿಎಂಶ್ರೀ ಸರ್ಕಾರಿ ಶಾಲೆಯ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮುಂಬರುವ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ದಾನಿಗಳ ಸಹಕಾರದಿಂದ ಕ್ರೀಡಾ ಸಮವಸ್ತ್ರ ಹಾಗೂ ಟ್ರ್ಯಾಕ್ಸೂಟ್ಗಳನ್ನು ವಿತರಿಸಲಾಯಿತು.
ಸಮಾಜ ಸೇವಕರಾದ ಏರ್ಟೆಲ್ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶ್ರೀಹರಿ ಹಾಗೂ ಕೊಂಡಪ್ಪ ಕೋದಂಡರಾಮ್ ಅವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಮತ್ತು ಟ್ರ್ಯಾಕ್ಸೂಟ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಏರ್ಟೆಲ್ ಸುರೇಶ್, ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ . ಇಂತಹ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಗತ್ಯವಾದ ಕ್ರೀಡಾ ಪರಿಕರಗಳು ಹಾಗೂ ಸಮವಸ್ತ್ರಗಳನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಸಹಾಯ ಹಾಗೂ ಪ್ರೋತ್ಸಾಹ ನೀಡುವಂತಹ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಾನಿಗಳಾದ ಶ್ರೀ ಹರಿ ಸಮಾಜ ಸೇವಕ ಏರ್ಟೆಲ್ ಸುರೇಶ್, ಕೋದಂಡ ರಾಮ್, ಕೊಂಡಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಯೂಥ್ ಕಾಂಗ್ರೆಸ್ ಸಕ್ಲೇನ್, ಬಿ ಆರ್ ಪಿ ಶಂಕರ್, ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.