ಸಾಹಿತ್ಯದ ಮೇಲಿನ ಬದ್ಧತೆಯಿಂದಲೇ ಸಾಧನೆ ಸಾಧ್ಯ: ಪ್ರೊ. ಹೆಚ್. ರಾಮಚಂದ್ರಪ್ಪ
ಕೆಜಿಎಫ್, ಆ. 7: ಲೇಖಕ ಹಾಗೂ ಉಪನ್ಯಾಸಕ ಡಿ. ಶ್ರೀನಿವಾಸ ಪ್ರಸಾದ್ ಅವರ 53ನೇ ಕೃತಿ ‘ಬಿದ್ದು ಮೇಲೆದ್ದವರು’ ಲೋಕಾರ್ಪಣೆ ಸಮಾರಂಭವು ನಗರದ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಗಂಗಾನಿಕೇತನ ಫೌಂಡೇಶನ್ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್. ರಾಮಚಂದ್ರಪ್ಪ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, 53 ಕೃತಿಗಳನ್ನು ರಚಿಸಿರುವುದು ಸಾಮಾನ್ಯ ಸಾಧನೆಯಲ್ಲ. ನಿರಂತರ ಅಧ್ಯಯನ, ಸತತ ಬರವಣಿಗೆ ಹಾಗೂ ಸಾಹಿತ್ಯದ ಮೇಲಿನ ಅಚಲ ಬದ್ಧತೆಯಿಂದ ಮಾತ್ರ ಇಂತಹ ಸಾಧನೆ ಸಾಧ್ಯವಾಗುತ್ತದೆ ಎಂದು ಲೇಖಕ ಡಿ. ಶ್ರೀನಿವಾಸ ಪ್ರಸಾದ್ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಜೀವನದಲ್ಲಿ ಉನ್ನತ ಸಾಧನೆ ಮಾಡಿ ತಂದೆ-ತಾಯಿಗಳಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು. ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನ ವಿಸ್ತಾರವಾಗುವುದಷ್ಟೇ ಅಲ್ಲದೆ ವ್ಯಕ್ತಿತ್ವವೂ ಪರಿಪಕ್ವಗೊಳ್ಳುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಎನ್.ಆರ್. ಪುರುಷೋತ್ತಮ ಮಾತನಾಡಿ, ಡಿ. ಶ್ರೀನಿವಾಸ ಪ್ರಸಾದ್ ಅವರ ಅನೇಕ ಲೇಖನಗಳು ಹಾಗೂ ಬರಹಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಅವರ ಸಾಹಿತ್ಯ ಪ್ರತಿಭೆ ಮತ್ತು ಬರವಣಿಗೆಯ ವೈವಿಧ್ಯತೆ ಪ್ರಶಂಸನೀಯವಾಗಿದೆ ಎಂದು ಹೇಳಿದರು.
“ನಿರಂತರ ಬರವಣಿಗೆಯ ಮೂಲಕ ಶ್ರೀನಿವಾಸ ಪ್ರಸಾದ್ ಅವರು ‘ನಡೆದಾಡುವ ವಿಶ್ವಕೋಶ’ವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 53 ಕೃತಿಗಳ ಮೈಲುಗಲ್ಲು ದಾಟಿರುವ ಅವರು ಇದೇ ಉತ್ಸಾಹ ಹಾಗೂ ಸಾಹಿತ್ಯ ಪ್ರೀತಿಯಿಂದ ಮುಂದುವರಿದು ಶೀಘ್ರದಲ್ಲೇ ತಮ್ಮ 100ನೇ ಕೃತಿಯನ್ನು ಲೋಕಾರ್ಪಣೆ ಮಾಡುವಂತಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜೈನ್ ಕಾಲೇಜಿನ ಕಚೇರಿಯ ಬಾಬು, ರಶ್ಮಿ, ಉಪನ್ಯಾಸಕರಾದ ಮಂಜುಳಾ, ನಾಗೇಶ್, ಅನಿತಾ, ಅಂಜಲಿ, ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಘಾತಿಮಾ ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಸ್ನಿಗ್ಧಾ ಹಾಗೂ ಸ್ಪಂದನಾ ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮವಾಗಿ ಲೇಖಕ ಹಾಗೂ ಉಪನ್ಯಾಸಕ ಡಿ. ಶ್ರೀನಿವಾಸ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಅತಿಥಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.