ಕೆ.ಸಿ.ವ್ಯಾಲಿ ನೀರಿನ ಶುದ್ಧೀಕರಣ ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ
ನ.12ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘಟನೆಗಳ ಪ್ರತಿಭಟನೆ-ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಭಾಗ್ಯನಗರ: ಕೆ.ಸಿ. ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣಗೊಳಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ಕೆರೆಗಳಿಗೆ ಹರಿಸುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಭಾರತಿ ಕಿಸಾನ್ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ (ರಿ.) ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 12ರ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಡಿ.ವಿ.ಜಿ. ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹೋರಾಟದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಹಿಂದೆ ರೈತರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಸರ್ಕಾರದ ವತಿಯಿಂದ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣಗೊಳಿಸಿ ಹರಿಸಬೇಕು. ಆಂಧ್ರಪ್ರದೇಶದ ಗಡಿಭಾಗದಲ್ಲಿ ಲಭ್ಯವಿರುವ ಕೃಷ್ಣಾ ನದಿ ನೀರನ್ನು ಅವಳಿ ಜಿಲ್ಲೆಗಳ ಕೆರೆಗಳಿಗೆ ಪೂರೈಸಲು ಶಾಶ್ವತ ಯೋಜನೆ ರೂಪಿಸಬೇಕು. ರೈತರ ಆರ್ಥಿಕ ಅಭಿವೃದ್ಧಿಗಾಗಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ನವೆಂಬರ್ 12ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುವ ಪ್ರತಿಭಟನೆಯ ಮೂಲಕ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲಾಗುವುದು. ಈ ಬಾರಿಯೂ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಾಗೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಗೋವಿಂದ ರೆಡ್ಡಿ ಮಾತನಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮುಖಂಡರಾದ ಅಶ್ವಥ್ ರೆಡ್ಡಿ,ಶಿವಾರೆಡ್ಡಿ, ವೆಂಕಟರಾಮರೆಡ್ಡಿ,ಮಂಜುನಾಥ್ ರೆಡ್ಡಿ, ನಾರಾಯಣರೆಡ್ಡಿ,ವೆಂಕಟರವಣಪ್ಪ,ಕೃಷ್ಣಾರೆಡ್ಡಿ,ಚೌಡರೆಡ್ಡಿ,ಅಶ್ವಥರೆಡ್ಡಿ,ನಾಗರಾಜ್ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು..