ರಾಜಗೇರಾ: ಮೃತ ಕಾರ್ಮಿಕರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಬೀದರ್ (ಆ.12): ಪಕ್ಕದ ತೆಲಂಗಾಣ ರಾಜ್ಯಕ್ಕೆ ಕೂಲಿ ಕೆಲಸಕ್ಕೆ ಹೋಗಿ ವಾಪಸು ತಮ್ಮೂರಿಗೆ ಟಂ ಟಂ ವಾಹನದಲ್ಲಿ ತೆರಳುತ್ತಿದ್ದ ವೇಳೆ ತೆಲಂಗಾಣ ರಾಜ್ಯದ ಜಹೀರಾಬಾದ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಗೇರಾ ಗ್ರಾಮದ 6 ಜನ ಕೂಲಿ ಕಾರ್ಮಿಕರ ಮನೆಗಳಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಮೃತ ಕಾರ್ಮಿಕರ ಮನೆಗಳಿಗೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಅವರು, ಮೃತರಿಗೆ ಅಂತಿಮ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ, ಮೃತರ ಕುಟುಂಬಗಳಿಗೆ ವೈಯಕ್ತಿಕ ನೆರವು ನೀಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ನನ್ನ ಕ್ಷೇತ್ರದ ಒಂದೇ ಊರಿನ ಆರು ಜನರು ಪ್ರಾಣ ಕಳೆದುಕೊಂಡಿರುವ ಹಾಗೂ ಟಂ ಟಂ ವಾಹನದಲ್ಲಿದ್ದ ಇನ್ನೂಳಿದ ಆರು ಜನರು ಗಾಯಗೊಂಡಿರುವ ಘಟನೆ ತುಂಬಾ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗದವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.
ಈ ಹಿಂದೆ 2022ರ ನವೆಂಬರ್ 04ರಂದು ನಮ್ಮ ಕ್ಷೇತ್ರದ ಬೇಮಳಖೇಡದ ಬಳಿ ಆಟೋ - ಲಾರಿ ನಡುವೆ ಅಪಘಾತ ಸಂಭವಿಸಿ, ನಮ್ಮ ಕ್ಷೇತ್ರದ ಉಡಮನಳ್ಳಿ ಗ್ರಾಮದ ಆರು ಜನ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು. ಆ ದುರಂತದ ಸಂದರ್ಭದಲ್ಲೇ ನಾನು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಅಧಿವೇಶನದಲ್ಲೇ ಒತ್ತಾಯಿಸಿದ್ದೆ.
ನಮ್ಮ ಜಿಲ್ಲೆಯ ಜನರು ಪಕ್ಕದ ರಾಜ್ಯಗಳಿಗೆ ಕೂಲಿ ಕೆಲಸಗಳಿಗೆ ಹೋಗುವುದನ್ನು ತಪ್ಪಿಸಬೇಕು. ನಮ್ಮ ಜನರಿಗೆ ನಮ್ಮ ಜಿಲ್ಲೆಯಲ್ಲೇ ಕೆಲಸ ಸಿಗುವಂತೆ ನೋಡಿಕೊಳ್ಳಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ನೂರು ದಿನಗಳಿಗೆ ಸೀಮಿತ ಮಾಡಬಾರದು ಎಂದು ಅಂದೇ ನಾನು ಒತ್ತಾಯಿಸಿದ್ದೆ. ಆ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೆ. ಈಗ ಮತ್ತೇ ಅಂತಹದೇ ದುರಂತ ಸಂಭವಿಸಿರುವುದು ತುಂಬಾ ನೋವುಂಟು ಮಾಡಿದೆ.
ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೂಲಿ ಕಾರ್ಮಿಕರ ಪರ ನಿಲ್ಲುವ ಕೆಲಸ ಮಾಡಬೇಕು. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಬೇಡಿಕೆಗೆ ತಕ್ಕಂತೆ ನಿರಂತರವಾಗಿ ಉದ್ಯೋಗ ಖಾತ್ರಿ ಕೆಲಸ ಸೇರಿದಂತೆ ಇತರೆ ಕೆಲಸಗಳನ್ನು ಅವರ ಗ್ರಾಮಗಳಲ್ಲಿ ನೀಡಬೇಕು.
ಮಂಗಳವಾರ ರಾತ್ರಿ ನಡೆದ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಆದಷ್ಟು ಬೇಗ ಪರಿಹಾರ ನೀಡಬೇಕು. ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರಿಗೆ ಉಚಿತ ಮತ್ತು ಉತ್ತಮ ಚಿಕಿತ್ಸೆ ಕೊಡಿಸಬೇಕು. ಮೃತ ಹಾಗೂ ಗಾಯಾಳು ಕಾರ್ಮಿಕರ ಕುಟುಂಬಗಳ ನೆರವಿಗೆ ಸರ್ಕಾರ ದಾವಿಸಬೇಕು.
ಈ ಭಾಗದ ಜನರು ಬರಗಾಲದ ಕಾರಣದಿಂದಾಗಿ ಗೂಳೆ ಹೋಗುತ್ತಿರುವುದರಿಂದ, ಸರ್ಕಾರ ಅವರಿಗೆ ಉದ್ಯೋಗ ಖಾತ್ರಿ ಕೆಲಸದಲ್ಲಿ ಇನ್ನೂ ಹೆಚ್ಚಿನ ಅವಕಾಶ ನೀಡಬೇಕು. ನಮ್ಮ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.