ಹಾಸನ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ

Jun 4, 2026 - 10:08
 0  32
ಹಾಸನ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ

ಕಾವ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯೂ ಆಗಬೇಕು : ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್.

ಹಾಸನ : ಕಾವ್ಯವೆಂದರೆ ಎಲ್ಲೋ ಕೂತು ಇನ್ನೆಲ್ಲಿಯೋ ಪ್ರಸಂಗ ಸೃಜಿಸುವುದಲ್ಲ, ಸಮಾಜದ ಅನುಭಾವಿಕ ನೆಲೆಗಟ್ಟಿನಲ್ಲಿರಬೇಕು. ಕಾವ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯೂ ಆಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಏಳೆಂಟು ವರ್ಷಗಳಿಂದಲೂ ರಾಜ್ಯ ಹಾಗೂ ನೆರೆರಾಜ್ಯಗಳಲ್ಲಿ ಕನ್ನಡದ ವಿವಿಧ ಆಯಾಮಗಳನ್ನು ಪರಿಚಯಿಸುತ್ತಾ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಹಾಸನ ವೇದಿಕೆಯ ಜನ್ಮಭೂಮಿ. ಎಲೆಮರೆ ಸಾಧಕರನ್ನು ಗುರುತಿಸಿ ಮುನ್ನೆಲೆಗೆ ತರುವ ಹಾಗೂ ಯುವ ಪ್ರತಿಭೆಗಳನ್ನು ಸಾಹಿತ್ಯ ಕ್ಷೇತ್ರದತ್ತ ಸೆಳೆಯಲು ಅನೇಕ ಗುಣಾತ್ಮಕ ಕಾರ್ಯಕ್ರಮಗಳನ್ನು ವಾಸು ಸಮುದ್ರವಳ್ಳಿ ಹಾಸನ ಜಿಲ್ಲಾಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಮಾಡಲಾಗಿತ್ತು. ಇನ್ನೂ ಉನ್ನತ ಮಟ್ಟಕ್ಕೆ ವೇದಿಕೆ ಬೆಳೆಸುವ ನಿಟ್ಟಿನಲ್ಲಿ ವಾಸು ಅವರನ್ನು ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನೂರಾರು ಕವಿಗೋಷ್ಠಿಗಳನ್ನು ಹಮ್ಮಿಕೊಂಡು ಹಲವಾರು ಹೊಸ ಪ್ರತಿಭೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಕೀರ್ತಿ ವೇದಿಕೆಗೆ ಸಲ್ಲುತ್ತದೆ. ಕವಿಗಳಿಗೆ ಅಧ್ಯಯನ ಮತ್ತು ಅಧ್ಯಾಪನಗಳು ಬಹಳ ಮುಖ್ಯ. ಒಬ್ಬ ಕವಿಗೆ ನಮ್ಮ ಕಾವ್ಯ ಪರಂಪರೆಯ ಜೊತೆಗೆ ವರ್ತಮಾನದ ತಲ್ಲಣಗಳ ಅರಿವಿರಬೇಕು. ಅಂದಾಗ ಮಾತ್ರ ಕಾವ್ಯ ಸಮಾಜದ ಧ್ವನಿಯಾಗುತ್ತದೆ ಎಂದರು.

ಮುಂಗಾರು ಕಾವ್ಯ ಕಲರವದ ಮಿಡಿತಗಳು

ಕವಿ ಧರ್ಮ ಕೆರಲೂರು ಓದಿದ ‘ಅನುಮತಿ’ ಕವಿತೆ ಮೇಲ್ನೋಟಕ್ಕೆ ಪ್ರೇಮ ನಿವೇದನೆಯಂತೆ ಕಂಡರೂ ಇಳೆ ಮತ್ತು ಮಳೆ ನಡುವಿನ ಪ್ರೇಮ ಪ್ರಸಂಗವನ್ನು ಕಟ್ಟಿಕೊಡುವಂತಿತ್ತು. ರುಮಾನ ಜಬೀರ್ ಅವರ ‘ಪ್ರಕೃತಿಯ ಮೌನ’ ಕಾಲಗಳ ಓಟದ ಜೊತೆಗೆ ನಿತ್ಯ ಜೀವನದ ಹೋರಾಟದ ಬದುಕನ್ನು ಅನಾವರಣ ಮಾಡಿತು. ನೀಲಾವತಿ ಸಿ.ಎನ್. ಅವರ ‘ಮಳೆಗೊಂದು ಮನವಿ’ ಕವಿತೆ ಮಾನವನ ಸ್ವಯಂಕೃತ ಅಪರಾಧದಿಂದ ಭೂತಾಪಮಾನ ಏರಿಕೆಯ ತಲ್ಲಣ ಹಾಗೂ ಇಳೆಗೆ ಮಳೆಯ ಅನಿವಾರ್ಯತೆಯನ್ನು ಪ್ರತಿಬಿಂಬಿಸಿತು. ಚಂದ್ರಕಲಾ ಎಂ. ಆಲೂರು ಅವರ ‘ಒಲವ ಮುಂಗಾರು ಮಳೆ’ ಕವಿತೆಯಲ್ಲಿ ಪ್ರಕೃತಿಯೇ ಪ್ರೇಯಸಿಯಾಗಿ ಒಡಮೂಡಿ ಬದುಕಿನ ಸಾಗುವಿಕೆಯನ್ನು ಅನಾವರಣಗೊಳಿಸಿತು. ಎಚ್.ಬಿ. ಚೂಡಾಮಣಿಯವರ ‘ನಿನ್ನ ಕಣ್ಗಳ ಮಿಂಚಿಂದ’ ಕವಿತೆ ಪ್ರೇಮ ನಿವೇದನೆ ಮಾಡಿದರೆ, ರಾಣಿ ಸಿ.ಚರಾಶ್ರೀಯವರ ‘ಯುಗದ ಹಾದಿ’ ಕವಿತೆ ವಸಂತ ಋತುವಿನ ಮಹತ್ವವನ್ನು ಸಾರಿತು. ಗಿರಿಜಾ ನಿರ್ವಾಣಿಯವರ ‘ಹಸಿರು ಗಿಡದ ಮೊಸರು ಮಲ್ಲಿಗೆ’ ಕವಿತೆ ಪ್ರಕೃತಿ ಸೌಂದರ್ಯದ ಜೊತೆಗೆ ಇಹ ಲೋಕದ ಜೀವಿಗಳ ಸಾಂಗತ್ಯಕ್ಕೆ ಕನ್ನಡಿ ಹಿಡಿಯಿತು. ಲಲಿತ ಎಸ್. ಸಕಲೇಶಪುರ ಅವರ ‘ಯೋಗ’ ಕವಿತೆ ಜೇಷ್ಠ ಮಾಸದ ಮಹತ್ವ, ಮಳೆಯ ರೌದ್ರಾವತಾರದ ಮುಂಗಾರಿನ ಗುಡುಗು, ಸಿಡಿಲುಗಳ ನರ್ತನ ಹಾಗೂ ಇಳೆಯ ಅನುಬಂಧವನ್ನು ಸಾರಿತು. ಪದ್ಮಾವತಿ ವೆಂಕಟೇಶ್ ಅವರ ‘ಮುಂಗಾರು ಮಳೆ’ ಹಾಗೂ ಗೊರೂರು ಅನಂತರಾಜುರವರ ‘ಮುಂಗಾರು ಹನಿಗಳು’ ಸಾಮಾಜಿಕ ವಿಡಂಬನೆ ಮಾಡಿದವು.

ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ೨೦೧೮ ರಲ್ಲಿ ಸಮಾನ ಮನಸ್ಸುಳ್ಳ ಆರು ಜನ ಬರಹಗಾರರಿಂದ ಯುವ ಜನರಲ್ಲಿ ಸಾಹಿತ್ಯಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಾಹಿತ್ಯಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಮುಖ್ಯ ವಾಹಿನಿಗೆ ತರುವ ಮುಖ್ಯ ಧ್ಯೇಯವನ್ನಾಗಿಸಿಕೊಂಡು ಜನ್ಮ ತಾಳಿತು. ಸಂಸ್ಥಾಪಕ ಅಧ್ಯಕ್ಷರಾಗಿ ಕೊಟ್ರೇಶ್ ಎಸ್.ಉಪ್ಪಾರ್, ಕಾರ್ಯದರ್ಶಿಯಾಗಿ ಡಾ.ಪಿ. ದಿವಾಕರ ನಾರಾಯಣ, ಕೋಶಾಧ್ಯಕ್ಷರಾಗಿ ಎಚ್.ಎಸ್.ಬಸವರಾಜ್, ಜಂಟಿ ಕಾರ್ಯದರ್ಶಿಯಾಗಿ ನಾಗರಾಜ್ ದೊಡ್ಡಮನಿ, ಸಂಘಟನಾ ಕಾರ್ಯದರ್ಶಿಯಾಗಿ ವಾಸು ಸಮುದ್ರವಳ್ಳಿ, ಸಹ ಕಾರ್ಯದರ್ಶಿಯಾಗಿ ದೇಸು ಆಲೂರು ಇವರುಗಳು ಸಂಸ್ಥಾಪಕ ಟ್ರಸ್ಟಿಗಳಾಗಿ ಆಯ್ಕೆಯಾಗಿ ಕಾರ್ಯೋನ್ಮುಖರಾದೆವು. ಹಾಸನದಲ್ಲಿ ಪ್ರಾರಂಭವಾದ ಈ ನೊಂದಾಯಿತ ಸಂಘಟನೆ ಕ್ರಮೇಣ ರಾಜ್ಯದ ಬಹುತೇಕ ಜಿಲ್ಲೆಗಳು ಸೇರಿದಂತೆ ಆಂದ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಸೌದಿ ಅರೇಬಿಯಾ, ಅಮೆರಿಕ ಸೇರಿದಂತೆ ರಾಜ್ಯ, ಹೊರರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಂಸ್ಥಿಕ ಪ್ರಾತಿನಿದ್ಯತೆಯನ್ನು ವಿಸ್ತರಿಸಿಕೊಂಡಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಬೇಲೂರು ತಾಲ್ಲೂಕು ಅಧ್ಯಕ್ಷ ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆ ಕಾವ್ಯಶ್ರೀ ಎಚ್.ಕೃಷ್ಣ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಕವಿಗಳಾದ ಗೊರೂರು ಅನಂತರಾಜು, ಲಲಿತ ಎಸ್.ಸಕಲೇಶಪುರ, ಗಿರಿಜಾ ನಿರ್ವಾಣಿ, ಧರ್ಮ ಕೆರಲೂರು, ರುಮಾನ ಜಬೀರ್, ಸಿ.ಎನ್. ನೀಲಾವತಿ, ಚಂದ್ರಕಲಾ ಎಂ. ಆಲೂರು, ಎಚ್.ಬಿ.ಚೂಡಾಮಣಿ, ರಾಣಿ ಸಿ. ಚರಾಶ್ರೀ, ಪದ್ಮಾವತಿ ವೆಂಕಟೇಶ್ ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott