16ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಪ್ರಕಾಶ್‌ರಿಂದ 300ಕ್ಕೂ ಹೆಚ್ಚು ಮನೆಗಳಿಗೆ ಗೋಧಿಹಿಟ್ಟು ವಿತರಣೆ

16ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಪ್ರಕಾಶ್‌ರಿಂದ 300ಕ್ಕೂ ಹೆಚ್ಚು ಮನೆಗಳಿಗೆ ಗೋಧಿಹಿಟ್ಟು ವಿತರಣೆ

     ಕೆಜಿಎಫ್: ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಕೆಜಿಎಫ್ ನಗರದ 16ನೇ ವಾರ್ಡ್‌ನ ಎಂ.ಎಲ್. ಬ್ಲಾಕ್ ನಿವಾಸಿಗಳಿಗೆ ಸಮಾಜ ಸೇವಕ ಪ್ರಕಾಶ್ ಅವರು 300ಕ್ಕೂ ಹೆಚ್ಚು ಮನೆಗಳಿಗೆ ತಲಾ 5 ಕೆ.ಜಿ. ಗೋಧಿಹಿಟ್ಟು ಪ್ಯಾಕೆಟ್‌ಗಳನ್ನು ವಿತರಿಸಿದರು.

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್, ಕಳೆದ ಒಂದು ವರ್ಷದಿಂದ 16ನೇ ವಾರ್ಡ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕುಡಿಯುವ ನೀರಿನ ಕ್ಯಾನ್‌ಗಳ ವಿತರಣೆ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಸಿ ಕಿಟ್‌ಗಳ ವಿತರಣೆ ಸೇರಿದಂತೆ ತಮ್ಮ ಕೈಲಾದಷ್ಟು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ವಾರ್ಡ್‌ನಲ್ಲಿ ಮೂಲಸೌಕರ್ಯಗಳ ಕೊರತೆ: 
ಅನೇಕರು ಚುನಾವಣೆಯಲ್ಲಿ ಗೆದ್ದು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, 16ನೇ ವಾರ್ಡ್‌ನಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ಬಂದ ಸಂದರ್ಭದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆ ಸೇರಿದಂತೆ ವಾರ್ಡ್‌ನ ವಿವಿಧ ಸಮಸ್ಯೆಗಳ ಕುರಿತು ಶಾಸಕರಾಗಲಿ, ಮಾಜಿ ನಗರಸಭಾ ಸದಸ್ಯರಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಾರ್ಡ್‌ನ ಅಭಿವೃದ್ಧಿಗೆ ಕೆಲಸ ಮಾಡುವ ಉದ್ದೇಶದಿಂದ ಮುಂಬರುವ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಪ್ರಕಾಶ್ ತಿಳಿಸಿದರು. ನನಗೆ ಜನರ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ. ನಿಮ್ಮ ಆಶೀರ್ವಾದ ಮತ್ತು ಬೆಂಬಲ ನನಗೆ ಬೇಕಾಗಿದೆ ಎಂದು ವಾರ್ಡ್‌ನ ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಷಾ ಮುಖಂಡರಾದ ಕೃಷ್ಣಮೂರ್ತಿ, ಸುರೇಶ್, ಕಲೈ ಅರಸನ್, ರಾಹುಲ್, ಬಾಬು, ಕುಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.