ಇ-ಹಾಜರಾತಿ ಸಮಸ್ಯೆ ಪರಿಹರಿಸಿ, ಟಿಎ-ಡಿಎ ನೀಡಿ; ತಾಪಂಗೆ ಮನವಿ
ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಸೌಲಭ್ಯ, ಪ್ರಯಾಣ ಭತ್ಯೆ ಕಲ್ಪಿಸಲು ಆಗ್ರಹ
ಮುದ್ದೇಬಿಹಾಳ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ MRW, VRW ಹಾಗೂ URW ಗೌರವಧನ ಕಾರ್ಯಕರ್ತೆಯರಿಗೆ ನಿಗದಿತ ಸಮಯದಲ್ಲಿ ಇ-ಹಾಜರಾತಿ ದಾಖಲಿಸಲು ಅವಕಾಶ ಕಲ್ಪಿಸಬೇಕು ಹಾಗೂ ಎಲ್ಲಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ (ಟಿಎ-ಡಿಎ) ನೀಡಬೇಕು ಎಂದು ಒತ್ತಾಯಿಸಿ ಕಾರ್ಯಕರ್ತೆಯರು ಗುರುವಾರ ತಾಲೂಕು ಪಂಚಾಯಿತಿ ಮ್ಯಾನೇಜರ್ ಡಿ.ಬಿ. ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಗೌರವಧನದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನಾವು ಪ್ರತಿದಿನ ನಿಗದಿತ ಸಮಯಕ್ಕೆ ಗ್ರಾಮ ಪಂಚಾಯಿತಿಗೆ ಹಾಜರಾಗಿ, ಬೆಳಿಗ್ಗೆ 10:30ರ ಒಳಗಾಗಿ ಇ-ಹಾಜರಾತಿ ದಾಖಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅದೇ ರೀತಿ ಸಂಜೆ 5:30ರ ಒಳಗಾಗಿ ಹಾಜರಾತಿ ದಾಖಲಿಸಿ ಕೆಲಸ ಮುಗಿಸುತ್ತಿದ್ದೇವೆ. ಆದರೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ನಿಗದಿತ ದಿನಾಂಕದಂದು ಇ-ಹಾಜರಾತಿ ದಾಖಲಿಸಲು ಅವಕಾಶ ನೀಡುತ್ತಿಲ್ಲ. ಇದರಿಂದ ಕಾರ್ಯಕರ್ತೆಯರಿಗೆ ತೊಂದರೆಯಾಗುತ್ತಿದ್ದು, ಕರ್ತವ್ಯ ನಿರ್ವಹಿಸಿದರೂ ಹಾಜರಾತಿ ದಾಖಲಿಸುವಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಂಗಳ ಮೊದಲ ವಾರದ ಅಂದರೆ ಪ್ರತಿ ತಿಂಗಳ 1ರಿಂದ 5ನೇ ತಾರೀಖಿನೊಳಗೆ ಇ-ಹಾಜರಾತಿ ದಾಖಲಿಸಲು ಅಗತ್ಯ ಅವಕಾಶ ಕಲ್ಪಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಅಲ್ಲದೆ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ MRW, VRW ಹಾಗೂ URW ಗೌರವಧನ ಕಾರ್ಯಕರ್ತೆಯರಿಗೆ ನಿಯಮಾನುಸಾರ ಟಿಎ-ಡಿಎ ಪ್ರಯಾಣ ಭತ್ಯೆ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೂಕ್ತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಕೆ. ಘಾಟಿ, ಗುರು ಡಂಬಳ, ದೇವಿಂದ್ರ ಮಾದರ, ಸಂಗು ಬಗಲಿ, ಸಂಗಣ್ಣ ಮದರಿ, ಸಂಗಮ್ಮ ಜಂಬಗಿ, ಶಶಿ ಯಾಳಾಗಿ, ಭೀರಪ್ಪ ಹೊಕ್ರಾಣಿ, ಪವಡೆಪ್ಪ ಚಲವಾದಿ, ಎಸ್.ಸಿ. ಮೇಟಿ, ಸಾಹೇಬಗೌಡ ಪಟೇಲ್, ಸಂಗಣ್ಣ ನಾಗರಾಳ, ಸಿದ್ದು ಮೇಟಿ, ರುದ್ರಗೌಡ ಗೌಡ್ರು, ನಾಗೇಶ ಅಮರಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.