ಮಾಲೂರು: ನಗರದ ನಗರಸಭೆ ಆವರಣದಲ್ಲಿ ನವೀಕರಣಗೊಳಿಸಲಾಗಿರುವ ಮಾಸ್ತಿ ವೆಂಕಟೇಶ್ ಐಯಂಗಾರ್ ರಂಗಮಂದಿರವನ್ನು ಲೋಕಾರ್ಪಣೆ ಗೊಳಿಸಿ ನಂತರ ಇದೇ ವೇದಿಕೆಯಲ್ಲಿ ನಮ್ಮ ಕರ್ನಾಟಕ ಸೇನೆ ನೇತೃತ್ವದಲ್ಲಿ
ಕನ್ನಡ ಪರ ಸಂಘಟನೆ ಗಳ ಒಕೂಟ ಹಾಗೂ ತಾಲ್ಲೂಕು ಆಡಳಿತ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಶಾಸಕ ಕೆ.ವೈ. ನಂಜೇಗೌಡ ಅವರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ರಾಮಲಿಂಗ ರೆಡ್ಡಿ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಂಗಮಂದಿರವನ್ನು ನವೀಕರಿಸಲಾಗಿದ್ದು, ಇದು ಕಲಾವಿದರು ಹಾಗೂ ಸಾರ್ವಜನಿಕರ ಬಳಕೆಗೆ ಅತ್ಯಂತ ಅನುಕೂಲಕರ ವೇದಿಕೆಯಾಗಲಿದೆ ಎಂದು ಹೇಳಿದರು.
ಮಾಲೂರು ತಾಲೂಕಿನ ಹೆಮ್ಮೆಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ನಿರ್ಮಿಸಲಾದ ಈ ರಂಗಮಂದಿರವು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದೆ ಎಂದು ತಿಳಿಸಿದರು.
ಶಾಸಕ ಕೆ.ವೈ. ನಂಜೇಗೌಡ ಅವರ ಅಭಿವೃದ್ಧಿ ದೃಷ್ಟಿಕೋನವನ್ನು ಶ್ಲಾಘಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಎಂದರು. ಮಾಸ್ತಿ ಬಸ್ ನಿಲ್ದಾಣ, ವಸತಿ ಶಾಲೆ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವುದರ ಜೊತೆಗೆ, ಜಿಲ್ಲಾ ಕೇಂದ್ರಗಳಲ್ಲಿಯೂ ಅಪರೂಪವಾದ ಸೌಲಭ್ಯಗಳನ್ನು ಒಳಗೊಂಡ ರಂಗಮಂದಿರ ನಿರ್ಮಾಣ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಜಿಲ್ಲೆಯ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಸೇವೆಯನ್ನು ಸ್ಮರಿಸಿದ ಸಚಿವರು, ಕ್ಯಾಸಂಬಳ್ಳಿ ಸಮೀಪ ಅವರ ಸ್ಮಾರಕ ನಿರ್ಮಾಣ ಪ್ರಗತಿಯಲ್ಲಿದ್ದು, ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಯೂ ಅವರ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೈನುಗಾರಿಕೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಎಂ.ವಿ. ಕೃಷ್ಣಪ್ಪ ಅವರ ಹೆಸರಿನ ಎಂವಿಕೆ ಗೋಲ್ಡನ್ ಡೈರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಎಂವಿಕೆ ಗೋಲ್ಡನ್ ಡೈರಿ ಹಾಗೂ ಕೆ.ಸಿ. ರೆಡ್ಡಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಮುಳಬಾಗಿಲಿನ ಖ್ಯಾತ ಚಿಂತಕ ಮತ್ತು ಸಾಹಿತಿ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಸ್ಮಾರಕ ನಿರ್ಮಾಣಕ್ಕೂ ಒತ್ತು ನೀಡಬೇಕಿದ್ದು, ಅವರ ಸಾಹಿತ್ಯ ಮತ್ತು ಚಿಂತನೆಗಳು ಮುಂದಿನ ಪೀಳಿಗೆಗೂ ತಲುಪುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಶಾಸಕ ಕೆ ವೈ ನಂಜೇಗೌಡ ಮಾತನಾಡಿ ಆಲೂರು ತಾಲೂಕು ಗಡಿ ಭಾಗವಾದರೂ ಸಹ ಕನ್ನಡ ಭಾಷೆಯೇ ಸಾರ್ವಭೌಮವಾಗಿದೆ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯಲ್ಲಿ ಮಾತನಾಡುವುದು ಓದುವುದು ಸರ್ಕಾರಿ ಶಾಲೆಗಳು ಉಳಿಸಿ ಬೆಳೆಸಿದ್ದಲ್ಲಿ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ಕ್ಷೇತ್ರಕ್ಕೆ ಇದುವರೆಗೂ ಯಾವುದೇ ಶಾಸಕರು ತರದಷ್ಟು ಅನುದಾನಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ.
ನಮ್ಮ ಕರ್ನಾಟಕ ಸೇನೆಯು ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎನ್. ಅನಿಲ್ ಕುಮಾರ್, ಮಾಜಿ ಶಾಸಕ ಎ. ನಾಗರಾಜು, ತಹಶೀಲ್ದಾರ್ ಎಂ.ವಿ. ರೂಪ, ತಾ.ಪಂ ಇಒ ಎಸ್.ಪ್ರಸಾದ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಅಂಜಿನಪ್ಪ, ನಿರ್ಗಮಿತ ಇಒ ವಿ. ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ. ಮುನೇಗೌಡ, ಗುರುಜಿ ಮಲ್ಲಿಕಾರ್ಜುನ ಮುತ್ಯಾಲು ರಾಜ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ ವಿ ಹನುಮಂತಯ್ಯ, ದಲಿತಮುಖಂಡ ತಿಪ್ಪಸಂದ್ರಶ್ರೀನಿವಾಸ್, ಪ್ರೇಂಡ್ಸ್ ಸಂತೋಷ್, ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್ ತಾಲೂಕು ಅಧ್ಯಕ್ಷ ಎಂ ರವಿಕುಮಾರ್ ಸಂಘಟನೆಯ ಎಸ್ ಎಂ ರಾಜು ಎ.ಎನ್ ದಯಾನಂದ್, ಕೆ.ಎನ್. ಜಗದೀಶ್, ಚನ್ನಕೃಷ್ಣ , ಅಶೋಕ್, ಸಿ.ಎಸ್.ಕೃಷ್ಣಪ್ಪ, ಆಂಜಿಕನ್ನಡಿಗ, ಶಿವಾರನಾರಾಯಣಸ್ವಾಮಿ, ಎ.ಎನ್.ದಯಾನಂದ,
ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.