ಪಟಾಕಿ ಕಿಡಿಗೆ ಹೊತ್ತಿ ಉರಿದ ಗುಜರಿ ಅಂಗಡಿ ಭಸ್ಮ

ಪಟಾಕಿ ಕಿಡಿಗೆ ಹೊತ್ತಿ ಉರಿದ ಗುಜರಿ ಅಂಗಡಿ ಭಸ್ಮ

ಭಾಗ್ಯನಗರ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಕಿಡಿ ತಗುಲಿ ಗುಜರಿ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಬಾಗೇಪಲ್ಲಿ ಪಟ್ಟಣದ ಚಿತ್ರಾವತಿ ನದಿ ದಡದ ಬಳಿ ನಡೆದಿದೆ.

ಪಟಾಕಿಯಿಂದ ಹಾರಿದ ಕಿಡಿ ಗುಜರಿ ಅಂಗಡಿಗೆ ತಗುಲಿದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಾಗೇಪಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಬೆಂಕಿ ಅವಘಡದಿಂದ ಗುಜರಿ ಅಂಗಡಿ ಮಾಲೀಕರಿಗೆ ಭಾರಿ ನಷ್ಟ ಉಂಟಾಗಿದ್ದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.

ಇನ್ನೊಂದೆಡೆ, ಗುಜರಿ ಅಂಗಡಿಗೆ ಯಾವುದೇ ಪರವಾನಗಿ ಇಲ್ಲದೆ ವ್ಯಾಪಾರ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ, ಅಗತ್ಯ ಕಾನೂನು ನಿಯಮಗಳನ್ನು ನಿರ್ಲಕ್ಷಿಸಿದ್ದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಂಗಡಿಯ ಪರವಾನಗಿ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ...