ಮಸ್ಕಂ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ನಿವಾಸಿಗಳ ಮನವಿ – ತಕ್ಷಣ ಸ್ಪಂದಿಸಿದ ಶಾಸಕಿ ರೂಪಕಲಾ ಶಶಿಧರ್
ಕೆಜಿಎಫ್: ನಗರದ 30ನೇ ವಾರ್ಡ್ ವ್ಯಾಪ್ತಿಯ ಮಸ್ಕಂ ಗ್ರಾಮದ ನಿವಾಸಿಗಳು ತಮ್ಮ ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಗುಣಮಟ್ಟದ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಗ್ರಾಮಾಭಿವೃದ್ಧಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕೆಂದು ನಿವಾಸಿಗಳು ವಿನಂತಿಸಿದರು.
ಮನವಿಯನ್ನು ಸ್ವೀಕರಿಸಿದ ಶಾಸಕಿ ರೂಪಕಲಾ ಶಶಿಧರ್ ಅವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ, "ನನ್ನ ಕ್ಷೇತ್ರದ ಪ್ರತಿಯೊಂದು ವಾರ್ಡ್ನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ. ಯಾವುದೇ ವಾರ್ಡ್ ಅನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮಸ್ಕಂ ಗ್ರಾಮಕ್ಕೆ ಶೀಘ್ರದಲ್ಲೇ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ನಿಮ್ಮ ಮನವಿಯಲ್ಲಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು," ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಯುವ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಮನವಿ ಮಾಡಿದರು.