ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನದ ಅಂಗವಾಗಿ ಭಕ್ತರಿಂದ ಅನ್ನದಾನ, ಸೇವಾ ಕಾರ್ಯ
ಮಾನವ ಸೇವೆಯೇ ಮಾಧವ ಸೇವೆ’ ಎಂಬ ಬಾಬಾ ಅವರ ಸಂದೇಶ ಸಾರಿದ ಭಕ್ತರು
ಭಾಗ್ಯನಗರ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬಾಬಾ ಭಕ್ತರು ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ಗೂಳೂರು ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸತ್ಯಸಾಯಿ ಬಾಬಾ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿಯಿಂದ ಸ್ಮರಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಸೇವಾ ಕಾರ್ಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಕ್ತರು, ಬಡವರು ಹಾಗೂ ನಿರ್ಗತಿಕರ ಕಲ್ಯಾಣಕ್ಕಾಗಿ ಸತ್ಯಸಾಯಿ ಬಾಬಾ ಅವರು ಸಲ್ಲಿಸಿರುವ ಸೇವೆ ಅಪಾರವಾದುದು. ಉಚಿತ ಆರೋಗ್ಯ ಸೇವೆ, ಶಿಕ್ಷಣ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಸೇವಾ ಮನೋಭಾವ ಇಂದಿಗೂ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಭಕ್ತರು ತಿಳಿಸಿದರು.
ಸತ್ಯಸಾಯಿ ಬಾಬಾ ಅವರ ‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದಂತೆ ಮಾನವರಿಗೆ ಮಾಡುವ ಸೇವೆಯೇ ದೇವರಿಗೆ ಸಲ್ಲಿಸುವ ಸೇವೆಯಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ದೈವತ್ವವನ್ನು ಕಾಣಬೇಕು. ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಬಾಬಾ ಅವರ ಸಂದೇಶವಾಗಿದ್ದು ಸೇವೆಯ ಮೂಲಕವೇ ಭಗವಂತನನ್ನು ಕಾಣಬಹುದು ಎಂಬ ಸತ್ಯಸಾಯಿ ಬಾಬಾ ಅವರ ಆದರ್ಶವನ್ನು ಪಾಲಿಸುವ ಉದ್ದೇಶದಿಂದ ಭಕ್ತರು ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಿದರು.
ಈ ಸಂಧರ್ಭದಲ್ಲಿ ಶ್ರೀ ಭಗವಾನ್ ಸತ್ಯಸಾಯಿ ಆರಾಧಕರಾದ ವೈ. ಶ್ರೀನಿವಾಸರೆಡ್ಡಿ, ವೈ.ಸ್ವರ್ಣಗೌರಿ, ವೈ. ಸಾಯಿ ಮನೋಹರ್, ಪಾವನಿ ಮನೋಹರ್,ಸಹಸ್ಯ,ತಪಸ್ಯಶಿವಾರೆಡ್ಡಿ, ವಿಜಯ್ ಕುಮಾರ್, ಪ್ರಜ್ವಲ್,ಮಂಜುನಾಥ್, ಸೇರಿದಂತೆ ಮತ್ತಿತರರು ಇದ್ದರು....