ಪುನೀತ್ ಆದರ್ಶ ಯುವಜನತೆಗೆ ದಾರಿದೀಪವಾಗಲಿ: ಸಂತೋಷ ಹಿರೇಮಠ ಸ್ವಾಮೀಜಿ
ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರು, ಸಾಧಕರಿಗೆ ಪ್ರಶಸ್ತಿ ಪ್ರಧಾನ
ಮುದ್ದೇಬಿಹಾಳ: ಕನ್ನಡ ನಾಡಿನ ಮಣ್ಣಿನಲ್ಲಿ ವಿಶಿಷ್ಟವಾದ ಸಂಸ್ಕಾರ ಮತ್ತು ಸಂಸ್ಕೃತಿ ಅಡಗಿದೆ. ಈ ನಾಡಿಗೆ ಅನೇಕ ರಾಜ ಮಹಾರಾಜರು ಅಪಾರ ಕೊಡುಗೆ ನೀಡಿದ್ದಾರೆ. ಕಲಾವಿದರ ಕ್ಷೇತ್ರದಲ್ಲಿಯೂ ಉತ್ತರ ಕರ್ನಾಟಕದ ಪ್ರತಿಭಾವಂತರನ್ನು ನಿರ್ಲಕ್ಷಿಸುವ ಪ್ರವೃತ್ತಿ ಕಂಡುಬರುತ್ತಿದೆ. ಆದರೆ ಕನ್ನಡ ಭಾಷೆ ಹಾಗೂ ಕಲೆಯ ಉಳಿವಿಗೆ ಉತ್ತರ ಕರ್ನಾಟಕದ ಕಲಾವಿದರ ಕೊಡುಗೆ ಮಹತ್ವದ್ದಾಗಿದೆ ಎಂಬುದನ್ನು ಎಲ್ಲರೂ ಅರಿಯಬೇಕು. ಇಂದು ಉತ್ತರ ಕರ್ನಾಟಕದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ಕನ್ನಡ ಭಾಷೆ, ನೆಲ, ಜಲ ಹಾಗೂ ನೀರನ್ನು ಉಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ಗಾನ ಗಾರುಡಿಗ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ನಾಡಿನಲ್ಲಿ ಅನೇಕ ಸಂತ ಮಹಾತ್ಮರು ಹಾಗೂ ರಾಜ ಮಹಾರಾಜರು ಆಳ್ವಿಕೆ ನಡೆಸಿ ಹೋಗಿದ್ದಾರೆ. ಕನ್ನಡ ನಾಡಿನ ರಕ್ಷಣೆ ಮತ್ತು ಉಳಿವಿಗಾಗಿ ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ವೇದಮೂರ್ತಿ ಸಂತೋಷ ಹಿರೇಮಠ ಸ್ವಾಮೀಜಿ ಹೇಳಿದರು.
ಹತ್ತು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕಿದೆ. ನಮ್ಮ ನಾಡು ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯ ನೆಲೆಬೀಡಾಗಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು. ನಮ್ಮನ್ನಗಲಿ ಐದು ವರ್ಷ ಕಳೆದರೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ನಟ ಪುನೀತ್ ರಾಜ್ಕುಮಾರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಹಾಗೂ ಗುತ್ತಿಗೆದಾರ ಸಿ.ಬಿ. ಅಸ್ಕಿ ಮಾತನಾಡಿ, ಶ್ರೀಶೈಲ ಹೂಗಾರ ಹಾಗೂ ಗೋಪಾಲ ಹೂಗಾರ ಅವರ ಕಲಾ ಬಳಗ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಅವರ ನೇತೃತ್ವದಲ್ಲಿ ಪ್ರತಿವರ್ಷ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಜೀವನದಲ್ಲಿ ಏಳು-ಬೀಳುಗಳು ಸಹಜವಾಗಿದ್ದು, ಅವುಗಳನ್ನು ಮೆಟ್ಟಿ ಮುನ್ನಡೆಯಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ಲ ಮಾತನಾಡಿ, ಎಲ್ಲ ಕಲಾವಿದರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸುವುದು ಸುಲಭದ ಕೆಲಸವಲ್ಲ. ಕಲಾವಿದರು ಹಲವು ಕಷ್ಟಗಳ ನಡುವೆಯೂ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತಾರೆ. ಅಂತಹ ಕಲಾವಿದರಿಗೆ ಸಮಾಜದ ವತಿಯಿಂದ ಸಹಕಾರ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಇದರಿಂದ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಾನ ಗಾರುಡಿಗ ಸಂಘದ ಅಧ್ಯಕ್ಷ ಮುನೀರ ಅವಟಿಗೇರ ಮಾತನಾಡಿ, ಈ ಹಿಂದೆ ಚಿಗುರು ಕಲಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ನಮನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಇದೀಗ ಗಾನ ಗಾರುಡಿಗ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಮುಂದುವರಿಸುತ್ತಿದ್ದೇವೆ. ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹ ಹೀಗೆಯೇ ಇರಲಿ. ಸಂಘಕ್ಕೆ ನೀಡುವ ಬೆಂಬಲವೇ ಮುಂದಿನ ಕಾರ್ಯಕ್ರಮಗಳನ್ನು ನಡೆಸಲು ಶಕ್ತಿಯಾಗಲಿದೆ ಎಂದರು.
ಎಸ್.ಕೆ. ಘಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಕಲಾವಿದರು ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಗ ಹಿರೇಮುರಾಳ ವತಿಯಿಂದ ಕಲಾವಿದರಿಗೆ ಅಪ್ಪು ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೈ.ಎಚ್. ವಿಜಯಕರ, ಪುರಸಭೆ ಮಾಜಿ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಅಮರೇಶ ಗೂಳಿ, ಅಶೋಕ ನಾಡಗೌಡ, ಹಿರೇಗೌಡರ, ಮದರಿ, ಸುಜಾತಾ ಶಿಂಧೆ, ಆಪ್ತಾಬ್ ಮನಿಯಾರ, ರವಿ ಅಮರನ್ನವರ, ಪರಶುರಾಮ ನಾಲತವಾಡ, ರಂಗಭೂಮಿ ಕಲಾವಿದ ಸಿದ್ದು ನಾಲತವಾಡ,ಸದು ಮಠ, ಕಲಾವಿದರಾದ ಗೋಪಾಲ ಹೂಗಾರ, ಶ್ರೀಶೈಲ ಹೂಗಾರ, ಸಂಗಮೇಶ ಶಿವಣಗಿ, ವಿನಾಯಕ ಭಟ್, ಶರಣು ಅಮರನ್ನವರ, ಮುನೀರ ಅವಟಿಗೇರ, ಎಸ್.ಕೆ. ಘಾಟಿ, ಡಿ.ಎಲ್. ಮಮದಾಪುರ, ಕಿರಣ ಮುದ್ದೇಬಿಹಾಳ, ಶಾರದಾ, ದೀಪರತ್ನಶ್ರೀ, ಶಾಂತಾ, ಪ್ರದೀಪ್ ದಾಸರ, ವೀರೇಶ ಹಿರೇಗೌಡರ, ವೀರೇಶ ಢವಳಗಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.
ಶ್ರೀಶೈಲ ಹೂಗಾರ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು.