ಕನಿಷ್ಠ ವೇತನ ಪರಿಷ್ಕರಣೆಗಾಗಿ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಕೆ....
ಕನಿಷ್ಟ ವೇತನವು ಕಾರ್ಮಿಕರ ಸಾಂವಿಧಾನಿಕ ಹಕ್ಕು....
--ಕೆ.ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾಧ್ಯಕ್ಷ
ವಿಸ್ತೃತ ವರದಿ:
ಕನಿಷ್ಟ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸಲು ಮತ್ತು ತುಟ್ಟಿ ಭತ್ಯೆ ಹೆಚ್ಚಿಸಿ ಕನಿಷ್ಟ ವೇತನ ಜಾರಿಗೊಳಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ದಾವಣಗೆರೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಎದುರು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮತ್ತು ಕಾರ್ಮಿಕ ಸಚಿವರಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಕನಿಷ್ಟ ವೇತನವು ಕಾರ್ಮಿಕರ ಶ್ರಮದ ಘನತೆಯನ್ನು ರಕ್ಷಿಸುವ ಸಾಂವಿಧಾನಿಕ ಹಕ್ಕಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಕನಿಷ್ಟ ವೇತನವು ಕಾರ್ಮಿಕರು ಬದುಕಲು ಪೂರಕವಾದ ವೇತನವಾಗಿರಬೇಕು ಎಂದು ಕನಿಷ್ಟ ವೇತನದ ಮಹತ್ವ ಮತ್ತು ಅಗತ್ಯತೆಯನ್ನು ತನ್ನ ತೀರ್ಪಿನಲ್ಲೇ ಇದೆ. ಆದರೆ ರಾಜ್ಯ ಸರಕಾರವು ಕಳೆದ 9 ವರ್ಷಗಳಿಂದ ಕನಿಷ್ಟ ವೇತನ ಪರಿಷ್ಕರಣೆ ಮಾಡದೇ ಅಸಂಘಟಿತ ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಕನಿಷ್ಟ ವೇತನ ಪರಿಷ್ಕರಣೆ ಪ್ರಕ್ರಿಯೆಯು ಕೊನೆಯದಾಗಿ 2016-17 ರಲ್ಲಿ ಆಗಿತ್ತು. ಕನಿಷ್ಟ ವೇತನ ಕಾಯ್ದೆ, 1948 ರ ಸೆಕ್ಷನ್ 3(ಬಿ) ಮತ್ತು ವೇತನ ಸಂಹಿತೆ, 2019 ರ ಸೆಕ್ಷನ್ 8(4) ರ ಅಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಕನಿಷ್ಟ ವೇತನವನ್ನು ಪರಿಶೀಲಿಸಿ ಪರಿಷ್ಕರಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಆದ್ದರಿಂದ ಸರಕಾರವು ನಾಳೆ ಮಂಡಿಸಲಿರುವ ಬಜೆಟ್‌ನಲ್ಲಿ ಕನಿಷ್ಟ ವೇತನ ಪರಿಷ್ಕರಣೆಯನ್ನು ಘೋಷಿಸಬೇಕು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಅವರಗೆರೆ ಮಾತನಾಡಿ 11 ಎಪ್ರಿಲ್ 2025 ರ ಕರಡು ಕನಿಷ್ಟ ಕೂಲಿ ಅಧಿಸೂಚನೆಯನ್ನು ಕೂಡಲೇ ಅಂತಿಮ ಅಧಿಸೂಚನೆಯನ್ನಾಗಿ ಪ್ರಕಟಿಸಬೇಕು, 3 ವರ್ಷಗಳ ವಿಳಂಬವನ್ನು ಸರಿದೂಗಿಸಲು ಪರಿಷ್ಕರಣೆಯು 2022 ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ ಜಾರಿಗೊಳಿಸಿ, ತುಟ್ಟಿಭತ್ಯೆ ದರವನ್ನು ಪ್ರತಿ ಗ್ರಾಹಕ ಬೆಲೆ ಸೂಚ್ಯಂಕ (CPI) ಪಾಯಿಂಟ್ 8 ಪೈಸೆಗೆ ಹೆಚ್ಚಿಸಬೇಕು, ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳ ಪ್ರಕಾರ ಕ್ಯಾಲೋರಿ ಸೇವನೆಯನ್ನು ಪ್ರಸ್ತಾವಿತ 2321.4 ಕ್ಯಾಲೋರಿಗಳ ಬದಲಿಗೆ 2700 ಕ್ಯಾಲೋರಿಗಳಿಗೆ ಹೆಚ್ಚಿಸಬೇಕು ಹಾಗೂ ಗಾರ್ಮೆಂಟ್ಸ್, ಬೀಡಿ, ಅಗರಬತ್ತಿ ಮತ್ತು ಪ್ಲಾಂಟೇಷನ್ ವಲಯಗಳಲ್ಲಿ ಮಹಿಳಾ ನೌಕರರು ಎದುರಿಸುತ್ತಿರುವ ಶೇಕಡಾ 40 ವೇತನ ಅಸಮಾನತೆಯನ್ನು ಏಕರೂಪದ ಅಧಿಸೂಚನೆಯ ಮೂಲಕ ಷೆಡ್ಯೂಲ್‌ವಾರು ತಾರತಮ್ಯವನ್ನು ಅಂತ್ಯಗೊಳಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರತಿಭಟನೆ ಮತ್ತು ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಿತು. ದಾವಣಗೆರೆಯಲ್ಲಿ ಹಳೇ ಪಿ.ಬಿ.ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಮುಂಭಾಗದಿಂದ ಕಾರ್ಮಿಕರು ಮೆರವಣಿಗೆಯ ಮೂಲಕ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿ ಎಸ್.ಅರ್.ಅರವಿಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಅವರಗೆರೆ ಚಂದ್ರು, ಬೆಳಲಗೆರೆ ರುದ್ರಮ್ಮ, ಪುಷ್ಪಾ, ಐರಣಿ ಚಂದ್ರು ಮತ್ತಿತರರು ಮಾತನಾಡಿದರು.
ಪ್ರತಿಭಟನಾ ಕಾರ್ಯಕ್ರಮದ ನೇತೃತ್ವವನ್ನು ಕೆ.ರಾಘವೇಂದ್ರ ನಾಯರಿ, ಹೆಚ್.ಜಿ.ಉಮೇಶ್ ಅವರಗೆರೆ, ಅವರಗೆರೆ ಚಂದ್ರು, ಐರಣಿ ಚಂದ್ರು, ವಿ.ಲಕ್ಷ್ಮಣ, ಯಲ್ಲಪ್ಪ, ಸುರೇಶ್ ಯರಗುಂಟೆ, ರಮೇಶ್ ದಾಸರ್, ಬೆಳಲಗೆರೆ ರುದ್ರಮ್ಮ, ಸರೋಜಾ, ಮುರುಗೇಶ್, ನಾಗಮ್ಮ, ಯಲ್ಲಮ್ಮ, ಪುಷ್ಪಾ, ಎ.ತಿಪ್ಪೇಶ್, ಶೇಖರ ನಾಯ್ಕ್, ಕೆರೆನಹಳ್ಳಿ ರಾಜು, ಚಿನ್ನಪ್ಪ, ಎಸ್.ಜೆ.ಎಂ.ನಗರ ಸುರೇಶ್, ಮುದಹದಡಿ ಸುರೇಶ್, ವೆಂಕಟೇಶ್, ಹೆಚ್.ಎಸ್.ಚಂದ್ರು, ಉಮೇಶ್ ಇಟಗಿ ಮತ್ತಿತರರು ವಹಿಸಿದ್ದರು.
ಕಾಂ.ಹೆಚ್.ಜಿ.ಉಮೇಶ್ ಅವರಗೆರೆ
ಪ್ರಧಾನ ಕಾರ್ಯದರ್ಶಿ
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್
ದಾವಣಗೆರೆ ಜಿಲ್ಲಾ ಸಮಿತಿ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
