ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಕವಿಗೋಷ್ಠಿ

Apr 8, 2026 - 08:28
 0  2
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಕವಿಗೋಷ್ಠಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕಾವ್ಯ ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಸ್ಪಂದಿಸಬೇಕು:ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್.

ಧಾರವಾಡ : ಕವಿಗಳಿಗೆ ಕಾವ್ಯ ಪರಂಪರೆಯ ಜೊತೆಗೆ ಹಿರಿಯ ತಲೆಮಾರಿನ ಕವಿಗಳ ಸಾಹಿತ್ಯದ ತಿರುಳು ಗೊತ್ತಿರಬೇಕು. ಕನ್ನಡ ಸಾಹಿತ್ಯೇತಿಹಾಸದಲ್ಲಿ ಜನಪದ ಸಾಹಿತ್ಯ ಹಾಗೂ ವಚನ ಸಾಹಿತ್ಯ ಅನುಭಾವದ ಮೌಲ್ಯಗಳನ್ನು ಕಟ್ಟಿಕೊಡುವುದರ ಜೊತೆಗೆ ತಳಸಮುದಾಯದ ಬದುಕಿಗೆ ಬಲ ತುಂಬಿವೆ. ಆದ್ದರಿಂದ ಕಾವ್ಯ ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಸ್ಪಂದಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಧಾರವಾಡದ ವತಿಯಿಂದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ ಅಸ್ಮಿತೆಗಾಗಿ ಸದಾ ತುಡಿಯಬೇಕಾಗಿದ್ದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದಾದ್ಯಂತ ಬಹುತೇಕ ನಿದ್ರಾವಸ್ಥೆಯಲ್ಲಿದ್ದು ರಾಜ್ಯಾಧ್ಯಕ್ಷನೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ಅಧಿಕಾರದಿಂದ ವಜಾಗೊಂಡಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಪ್ಪುಚುಕ್ಕೆಯಾಗಿದೆ. ಪ್ರಸ್ತುತ ನೂರಾರು ಕನ್ನಡಪರ ಸಂಘಟನೆಗಳು ಇಂದು ಕಾರ್ಯೋನ್ಮುಖವಾಗಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ಜೀವಂತವಾಗಿದೆ. ಜಾತಿ ಮತ್ತು ರಾಜಕಾರಣಗಳನ್ನೇ ಹೊದ್ದು ಮಲಗಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಆಶಯಗಳನ್ನು ಮರೆತು ಕಳಿತಿರುವುದು ಕನ್ನಡಿಗರಾದ ನಾವು ಜಾಗೃತಿಗೊಳ್ಳಬೇಕಿದೆ. ನಾಡಿನ ಹಿರಿಯ ಸಾಹಿತಿ, ಬಸವ ತತ್ತ್ವವಾದಿ ರಂಜಾನ್ ದರ್ಗಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಕರೋನಾ ಕಾಲ ಘಟ್ಟದಲ್ಲಿ ಆರಂಭವಾದ ವೇದಿಕೆ ಬಸವಣ್ಣ ಹಾಗೂ ಕುವೆಂಪುರವರ ವಿಚಾರಧಾರೆಗಳ ಅಡಿಯಲ್ಲಿ ಸಮಸಮಾಜದ ಕನಸಿನೊಂದಿಗೆ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸುವ ಹಾಗೂ ಯುವಕ, ಯುವತಿಯರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಉಪಾಧ್ಯಕ್ಷ ಶಾಲಿನಿ ರುದ್ರಮುನಿ ಹಾಗೂ ಜಿಲ್ಲಾಧ್ಯಕ್ಷರಾದ ಎ.ಎ. ದರ್ಗಾರವರ ನಾಯಕತ್ವ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಸಹಕಾರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಧಾರವಾಡದಲ್ಲಿ ನಮ್ಮ ವೇದಿಕೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಗೌರವಾಧ್ಯಕ್ಷ ಹಾಗೂ ಹಿರಿಯ ಶರಣ ಸಾಹಿತಿ ರಂಜಾನ್ ದರ್ಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜಕಾರಣಿಗಳು ಹಾಗೂ ಕಾರ್ಪೋರೇಟರ್‌ಗಳು ತಮ್ಮ ತಮ್ಮ ವೈಯಕ್ತಿಕ ವರ್ಚಸ್ಸಿಗೋಸ್ಕರ ಧರ್ಮಂಧತೆಯಲ್ಲಿ ತೇಲಾಡುತ್ತಾ ಯುದ್ಧಗಳನ್ನು ಘೋಷಿಸಿ ಐಷಾರಾಮಿ ಬದುಕು ಸಾಗಿಸುತ್ತಾ ಜನಸಾಮಾನ್ಯರನ್ನು, ಸಮಾಜದ ಕಟ್ಟಕಡೆಯ ಸಮುದಾಯದಿಂದ ಬಂದ ಸೈನಿಕರನ್ನು ಬಲಿಕೊಡುತ್ತಾ ಧಮನಿತರ ಮೇಲೆ ಕ್ರೆöರ‍್ಯ ಮೆರೆಯುತ್ತಿರುವುದು ದುರಂತ ಸಂಗತಿ. ಎಲ್ಲೋ ಮಾಡಿದ ಯುದ್ಧಗಳು ಮತ್ಯಾವುದೋ ದೇಶದ ಆರ್ಥಿಕತೆ, ಸಾಮಾಜಿಕ, ಸಾಂಸ್ಕೃತಿಕತೆಯ ಮೇಲೆ ಪ್ರಭಾವ ಬೀರುತ್ತಿದೆ. ಜಗತ್ತಿನ ಎಲ್ಲಾ ಮಹಾಕಾವ್ಯಗಳು ಸಹ ಯುದ್ಧದ ಭೀಕರತೆಯ ಜೊತೆಗೆ ಅಂತಿಮವಾಗಿ ಶಾಂತಿಯನ್ನು ಸಾರಿವೆ. ಭರತ ಬಾಹುಬಲಿಯಿಂದ, ರಾಮಾಯಣ, ಮಹಾಭಾರತ ಸೇರಿದಂತೆ ಎಲ್ಲಾ ಮಹಾಕಾವ್ಯಗಳ ಅಚಿತಿಮ ಸಂದೇಶ ಮಾನವ ಕುಲದ ಸಮೃದ್ಧಿ, ಶಾಂತತೆ, ನೆಮ್ಮದಿಯಾಗಿವೆ. ಬರಹಗಾರರು ವರ್ತಮಾನದ ತಲ್ಲಣಗಳ ಮೇಲೆ ಬೆಳಕು ಚೆಲ್ಲಬೇಕು. ನಮಗೆಲ್ಲಾ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ನಡೆ ನುಡಿಗಳೊಂದಾದ ಬದುಕಿನ ತತ್ತ್ವ ಸಿದ್ಧಾಂತಗಳು ಆದರ್ಶವಾಗಬೇಕು. ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಲಿಂಗಾತೀತವಾಗಿ ವಿಶ್ವಮಾನವ ಮೌಲ್ಯಗಳನ್ನು ಸಾರುತ್ತಾ ಕಾಯಕ ಸಿದ್ಧಾಂತದಡಿಯಲ್ಲಿ ಸಮಸಮಾಜವನ್ನು ಕಟ್ಟಿದ ಬಸವಾದಿ ಶರಣರ ಬದುಕು ನಿತ್ಯ ಆದರ್ಶವಾಗಬೇಕು. ದಯೆಬೇಕು ಸಕಲ ಪ್ರಾಣಿಗಳೆರಲಿ ಎಂಬಂತೆ ಸಕಲ ಜೀವಜಂತುಗಳ ಬಗೆಗೆ ದಯೆತೋರಬೇಕು. ಇಂದಿನ ಕವಿಗೋಷ್ಠಿಯಲ್ಲಿ ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಯುದ್ಧ ಹಾಗೂ ಯುಗಾದಿ ವಿಷಯಗಳಡಿಯಲ್ಲಿ ಬರೆದ ಬಹುತೇಕ ಕವಿತೆಗಳು ಸಮಸಮಾಜದ ಕನಸಿಗೆ ಒತ್ತಾಸೆಯಾಗಿ ನಿಂತವು. ಅಸ್ಲಾಂ ದರ್ಗಾ ಅವರ ನಾಯಕತ್ವದಲ್ಲಿ ಧಾರವಾಡ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉತ್ತಮೋತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇವತ್ತಿನ ಕವಿಗೋಷ್ಠಿ ಅತ್ಯಂತ ಯಶಸ್ವೀಯಾಗಿದೆ ಎಂದು ಆಶಿಸಿದರು.

ರಾಜ್ಯ ಉಪಾಧ್ಯಕ್ಷೆ ಶಾಲಿನಿ ಆರ್. ರುದ್ರಮುನಿ ತಾಲ್ಲೂಕು ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಮೌಲ್ಯಗಳನ್ನು ಪಸರಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾಧ್ಯಕ್ಷರಾದ ಎ.ಎ.ದರ್ಗಾರವರ ಮಾರ್ಗದರ್ಶನದಲ್ಲಿ ಹಿರಿಯ ಸಾಹಿತಿ ಸಂಧ್ಯಾ ಧೀಕ್ಷಿತರವರ ನೇತೃತ್ವದಲ್ಲಿ ಹುಬ್ಬಳ್ಳಿ ಘಟಕ ಹಾಗೂ ಶಿವು ಖನ್ನೂರರವರ ನೇತೃತ್ವದಲ್ಲಿ ಧಾರವಾಡ ತಾಲ್ಲೂಕು ಕಾರ್ಯನಿರ್ವಹಿಸುತ್ತಿವೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಗಟ್ಟಿಯಾಗಿ ವೇದಿಕೆಯನ್ನು ಕಟ್ಟಬೇಕಾದ ಜವಬ್ದಾರಿ ನಮ್ಮ ಮೇಲಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎ.ಎ.ದರ್ಗಾ ಪ್ರಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಒಂದು ಕಾಲಘಟ್ಟದಲ್ಲಿ ಉಚ್ಛಾçಯ ಸ್ಥಿತಿಯಲ್ಲಿದ್ದ ಧಾರವಾಡ ಇಂದು ನಿರಾಸಕ್ತಿಯೆಡೆಗೆ ಸಾಗುತ್ತಿರುವುದು ದುರಂತ. ಸಾಹಿತ್ಯ ಸಮ್ಮೇಳನ ಹಾಗೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಯುವಜನತೆ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಕ್ಷೀಣಿಸುತ್ತಿದೆ. ಇದು ಭವಿಷ್ಯಕ್ಕೆ ತುಂಬಾ ನಿರಾಸೆಯನ್ನುಂಟು ಮಾಡುತ್ತದೆ. ಸಾಹಿತ್ಯ ಸಂಘಟನೆಗಳು ಹಾಗೂ ಸಾಹಿತಿಗಳು ಇಂದಿನ ಯುವಜನತೆಗೆ ಸ್ಫೂರ್ತಿತುಂಬ ಬೇಕಿದೆ. ಸಾಹಿತ್ಯದ ಜಾಗೃತಿ ಮೂಡಿಸಬೇಕಿದೆ. ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಬೇಕಿದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮೂಲ ಉದ್ಧೇಶವೇ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಾಗಿದೆ ಎಂದರು.

ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ರಾಜ್ಯ ಗೌರವಾಧ್ಯಕ್ಷ ರಂಜಾನ್ ದರ್ಗಾ, ರಾಜ್ಯ ಉಪಾಧ್ಯಕ್ಷೆ ಶಾಲಿನಿ ಆರ್. ರುದ್ರಮುನಿ, ಜಿಲ್ಲಾಧ್ಯಕ್ಷ ಎ.ಎ.ದರ್ಗಾ, ನಿವೃತ್ತ ಪ್ರಾಚಾರ್ಯರಾದ ಪ್ರೊ. ಎಸ್.ಆರ್. ಆಶಿ, ಹಿರಿಯ ಸಾಹಿತಿ ಎಂ.ಡಿ.ಒಕ್ಕುಂದ, ಧಾರವಾಡ ತಾಲ್ಲೂಕು ಅಧ್ಯಕ್ಷ ಶಿವು ಎಂ. ಖನ್ನೂರ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷೆ ಸಂಧ್ಯಾ ಧೀಕ್ಷಿತ ಮುಂತಾದವರು ಮಾತನಾಡಿದರು.

ಧಾರವಾಡ ಜಿಲ್ಲಾಮಟ್ಟದ ಕವಿಗೋಷ್ಠಿ

ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಸುಹಾಸಿನಿ ಕುಕ್ಕಡೊಳ್ಳಿ, ಸುಲೋಚನಾ ಮಾಲಿ ಪಾಟೀಲ, ಮಂಜುನಾಥ ಮದ್ನೂರು, ಎಸ್.ಎಂ. ಮುಲ್ಲಾ, ಶ್ರೀನಿವಾಸ ಪಾಟೀಲ, ಪರ್ವೀನ್ ದರ್ಗಾ, ಡಾ.ರೇಣುಕಾತಾಯಿ ಎಂ. ಸಂತಬಾ, ಜ್ಯೋತಿ ಎಂ. ಚಿನಗುಂಡಿ, ದೀಪಾ ಜವಳಿ, ಭಾರತಿ ಬಡಿಗೇರ, ಗಣೇಶ ಏಸುಗಡೆ, ಸಂತೋಷ ಕರೆಮಳ್ಳನವರ, ಶಾಂತ ಕೆ. ಹೊಂಬಳ, ಪ್ರಿಯಾಂಕ ಮಾವಿನಕರ, ಮಲ್ಲಮ್ಮ ಯಾತಗಲ್ಲ, ಪದ್ಮಾ ಕಲೆಗಾರ, ಗಿರಿಜಾ ಸಂಗೊಳ್ಳಿ, ಪಾರ್ವತಿ ಹಮ್ಮಿಗೆ, ಮೇಘಾ ಹುಕ್ಕೇರಿ, ಸಂಗನಗೌಡ ಯಾಳಗಿ, ರಾಹುಲ ಉಪ್ಪಾರ, ಪಾರಕ್ಕ ದಾನನ್ನವರ್, ರಾಜೇಶ್ವರಿ ಕೋಲಕಾರ, ದೀಪಶ್ರೀ ನಾಯಕ, ಅಶೋಕ ಮುತ್ತಗಿ, ಪದ್ಮಜಾ ಉಮರ್ಜಿ, ಮಂಗಳಾ ನಾಡಿಗೇರ, ಸುಮಾ ಜೋಷಿ ಸೇರಿದಂತೆ ಹಲವರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456