ಭೂಸ್ವಾಧೀನ ಪ್ರಕ್ರಿಯೆಯ ಗೊಂದಲ ಪರಿಹಾರ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳ ಪರಿಹಾರ ವಿತರಣೆಯಲ್ಲಿನ ಗೊಂದಲಗಳನ್ನು ಹಂತ ಹಂತವಾಗಿ ಬಗೆಹರಿಸುತ್ತಿದ್ದು,ಹೇಮಾವತಿ ನಾಲೆಯ ಕಾಮಗಾರಿಯನ್ನು ಶೀಘ್ರವೇ ಪುನರಾರಂಭಿಸಲಾಗುವುದು ಎಂದು ಹೇಮಾವತಿ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುಳಾ ತಿಳಿಸಿದರು.
ಬುಧವಾರ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಹೇಮಾವತಿ ನಾಲಾ ಕಾಮಗಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 5 ಎಕರೆ ಜಮೀನಿನಲ್ಲಿ ತಕರಾರು ಉಂಟಾಗಿ ಕಾಮಗಾರಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೈತರ ಮನವೋಲಿಸಿದ್ದಾರೆ.
ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 154 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ರೈತರ ಕುಟುಂಬಗಳಲ್ಲಿನ ಆಂತರಿಕ ವ್ಯಾಜ್ಯಗಳು ಹಾಗೂ ಪರಿಹಾರದ ಮೊತ್ತ ನಿಗದಿಯಲ್ಲಿನ ಗೊಂದಲಗಳಿಂದಾಗಿ ಕಾಮಗಾರಿಗೆ ಅಡ್ಡಿಯಾಗಿತ್ತು. ಇಂದು ಅಗಸರಹಳ್ಳಿಯಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ರೈತರು ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದು, ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಭೂಮಿ ಬಿಟ್ಟುಕೊಟ್ಟ ರೈತರು ಅಗತ್ಯ ದಾಖಲೆಗಳೊಂದಿಗೆ ಹೇಮಾವತಿ ನಾಲಾ ಕಚೇರಿಗೆ ಅರ್ಜಿ ಸಲ್ಲಿಸಿದರೆ, ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಅವರ ಖಾತೆಗೆ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಗಸರಹಳ್ಳಿಯ ರೈತ ಷಡಕ್ಷರಿ ಮಾತನಾಡಿ, ನಮ್ಮ ಮತ್ತು ನಮ್ಮ ಚಿಕ್ಕಪ್ಪನವರ ನಡುವಿನ ಜಮೀನಿನ ಆಂತರಿಕ ವ್ಯಾಜ್ಯದ ಕಾರಣದಿಂದಾಗಿ ನಾವು ಕಾಮಗಾರಿಗೆ ತಕರಾರು ಎತ್ತಿದ್ದೆವು. ಆದರೆ, ಭೂಸ್ವಾಧೀನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನನ್ನು ಬಿಟ್ಟುಕೊಡುವಂತೆ ಕೋರಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಹಾಗೂ ಇಲ್ಲಿರುವ ಎಲ್ಲಾ ರೈತ ಬಾಂಧವರ ಒತ್ತಾಯದ ಮೇರೆಗೆ, ಹೇಮಾವತಿ ನಾಲೆ ಕಾಮಗಾರಿಗೆ ನಮ್ಮ ಕಡೆಯಿಂದ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಸಮ್ಮತಿಸಿದ್ದೇವೆ ಎಂದರು.
ಹೇಮಾವತಿ ಹೋರಾಟಗಾರ ಮಧು ಶಾವಿಗೇಹಳ್ಳಿ ಮಾತನಾಡಿ, ಹೇಮಾವತಿ ನಾಲೆಯ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ದಾಖಲಾತಿಗಳ ಗೊಂದಲ ಹಾಗೂ ಭೂಸ್ವಾಧೀನದ ಸಮಸ್ಯೆಗಳನ್ನು ಬಗೆಹರಿಸಿ, ಕೆಲಸಕ್ಕೆ ಅನುವು ಮಾಡಿಕೊಡಬೇಕೆಂದು ನಾವು ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಭೂಸ್ವಾಧೀನಾಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೇ ರೀತಿ ಕಾಡೇನಹಳ್ಳಿ ಮತ್ತು ದಬ್ಬೇಗಟ್ಟ ಭಾಗದ ರೈತರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬೇಕು. ಆ ಮೂಲಕ ಹೇಮಾವತಿ ನಾಲೆ ಕಾಮಗಾರಿಯು ಸುಗಮವಾಗಿ ನಡೆಯಲು ಸಹಕರಿಸಬೇಕೆಂದು ಈ ಭಾಗದ ಎಲ್ಲಾ ರೈತ ಬಾಂಧವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
