ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆಯಾಗಿ ಆರ್. ಪೂರ್ಣಿಮಾ ಆಯ್ಕೆ
ಬೆಂಗಳೂರು, ಏ. 30: ಕರ್ನಾಟಕ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಡಾ.ಆರ್. ಪೂರ್ಣಿಮಾ ಅವಿರೋಧವಾಗಿ ಆಯ್ಕೆಯಾದರು.
ಪ್ರೆಸ್ಕ್ಲಬ್ನಲ್ಲಿ ಗುರುವಾರ ನಡೆದ ಸಂಘದ ಸರ್ವಸದಸ್ಯೆಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷೆಯಾಗಿ ಎನ್.ವಿ. ಸೌಮ್ಯರಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಭಟ್, ಜಂಟಿ ಕಾರ್ಯದರ್ಶಿಯಾಗಿ ಡಿ. ಯಶೋದಾ, ಖಜಾಂಚಿಯಾಗಿ ವಾಣಿಶ್ರೀ ಜೆ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಪಿ. ಸುಶೀಲಾ, ಕೆ.ಎಚ್.ಸಾವಿತ್ರಿ, ಸಿ.ಜಿ. ಮಂಜುಳಾ, ಕಾನ್ಸೆಪ್ಟಾ ಫರ್ನಾಂಡೀಸ್, ಶಮಂತ ಡಿ.ಎಸ್., ಎ.ಬಿ. ರುದ್ರಮ್ಮ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಂಘದ ನೂತನ ಉಪಾಧ್ಯಕ್ಷೆ ಎನ್.ವಿ.ಸೌಮ್ಯರಾಣಿ ಅವರ ಪರಿಚಯ
ಎನ್.ವಿ ಸೌಮ್ಯರಾಣಿ - ವ್ಯಕ್ತಿ ಪರಿಚಯ
ಕಾನೂನು ಮತ್ತು ಪತ್ರಿಕೋದ್ಯಮ– ಸಮಾಜದ ಸ್ವಾಸ್ಥ್ಯ ಕಾಪಾಡುವ ಎರಡೂ ಭಿನ್ನ ಹಾಗೂ ಸವಾಲಿನ ಕ್ಷೇತ್ರಗಳಲ್ಲಿ ಸಮಾನ ಅನುಭವ ಹೊಂದಿರುವ ಎನ್.ವಿ. ಸೌಮ್ಯರಾಣಿ ಅವರು ಕರ್ನಾಟಕದ ಹಿರಿಯ ಪತ್ರಕರ್ತೆಯರಲ್ಲಿ ಒಬ್ಬರು. ಕೇವಲ ಸುದ್ದಿಯನ್ನು ವರದಿ ಮಾಡುವುದಕ್ಕಷ್ಟೇ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳ ವಿರುದ್ಧ ದನಿ ಎತ್ತುವ ಮೂಲಕ ಪತ್ರಿಕಾ ವೃತ್ತಿಗೆ ನೈಜ ಅರ್ಥ ಕಲ್ಪಿಸಿದವರು.
ಇವರ ಸೌಮ್ಯರಾಣಿ ವೃತ್ತಿಬದುಕು ಆರಂಭವಾಗಿದ್ದು ನ್ಯಾಯಾಲಯದ ಅಂಗಳದಿಂದ. 2005ರ ಸೆಪ್ಟೆಂಬರ್ನಲ್ಲಿ ಅಂದಿನ ಬಳ್ಳಾರಿ (ಇಂದಿನ ವಿಜಯನಗರ) ಜಿಲ್ಲೆಯ ಹೂವಿನ ಹಡಗಲಿಯಲ್ಲಿ ವಕೀಲೆಯಾಗಿ ವೃತ್ತಿ ಆರಂಭಿಸಿದರು. ಆದರೆ, ಸಮಾಜದ ಆಗುಹೋಗುಗಳ ಬಗ್ಗೆ ಇದ್ದ ತೀವ್ರ ತುಡಿತ ಅವರನ್ನು ಪತ್ರಿಕೋದ್ಯಮದತ್ತ ಸೆಳೆಯಿತು.
ಅದೇ ವರ್ಷದ ಡಿಸೆಂಬರ್ನಲ್ಲಿ ಹೈದರಾಬಾದ್ನ 'ಈಟಿವಿ' (ETV) ಸಂಸ್ಥೆಯಲ್ಲಿ ಕಾಪಿ ಎಡಿಟರ್ ಹಾಗೂ ವರದಿಗಾರ್ತಿಯಾಗಿ ಮಾಧ್ಯಮ ಕ್ಷೇತ್ರಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. 2006ರಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡು, ದೃಶ್ಯ ಮಾಧ್ಯಮದ ವರದಿಗಾರಿಕೆಯಲ್ಲಿ ಯಶಸ್ವಿ ಹೆಜ್ಜೆಗಳನ್ನಿಟ್ಟರು.
2009ರಲ್ಲಿ 'ಸಮಯ ಟಿವಿ' (Samaya TV) ಸೇರಿದ ಅವರು, 2014ರವರೆಗೆ ರಾಜಕೀಯ ವರದಿಗಾರ್ತಿಯಾಗಿ ಪ್ರಮುಖ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ರಾಜ್ಯ ರಾಜಕಾರಣದ ಸೂಕ್ಷ್ಮ ವಿದ್ಯಮಾನಗಳನ್ನು ವಿಶ್ಲೇಷಿಸುವಲ್ಲಿ ಮತ್ತು ನಿಖರ ವರದಿಗಾರಿಕೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು.
ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ವೃತ್ತಿಬದುಕನ್ನು ವಿಸ್ತರಿಸಿಕೊಂಡ ಅವರು, 2018ರಿಂದ '101Reporters.com' ಸಂಸ್ಥೆಯ ಮೂಲಕ ಹವ್ಯಾಸಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರಿನವರಾದ ಸೌಮ್ಯರಾಣಿ ಅವರು, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೌಮ್ಯರಾಣಿ ಅವರು ಕಲಾ ವಿಭಾಗದಲ್ಲಿ ಪದವಿ (B.A.) ಹಾಗೂ ಕಾನೂನು ಪದವಿ (LL.B.) ಪಡೆದಿದ್ದಾರೆ. ಈ ಶೈಕ್ಷಣಿಕ ಹಿನ್ನೆಲೆಯೇ ಅವರ ವರದಿಗಾರಿಕೆಗೆ ಮತ್ತು ರಾಜಕೀಯ ವಿಶ್ಲೇಷಣೆಗೆ ಅಗತ್ಯವಾದ ತಾರ್ಕಿಕ ಸ್ಪಷ್ಟತೆಯನ್ನು ಒದಗಿಸಿದೆ.
ಇವರು ಕೇವಲ ಕ್ಯಾಮೆರಾ ಮತ್ತು ಲೇಖನಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ನಿರ್ಭೀತವಾಗಿ ಧ್ವನಿ ಎತ್ತುವ ನೈಜ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಪತ್ರಿಕೋದ್ಯಮದ ದಶಕಗಳ ಅಪಾರ ಅನುಭವ, ಕಾನೂನಿನ ಜ್ಞಾನ ಮತ್ತು ಸಮಾಜಮುಖಿ ಚಿಂತನೆಗಳ ಅಪರೂಪದ ಸಂಗಮವಾಗಿರುವ ಎನ್.ವಿ. ಸೌಮ್ಯರಾಣಿ ಅವರು ಪ್ರಸ್ತುತ ಮಾಧ್ಯಮ ಲೋಕದ ಓರ್ವ ಗಟ್ಟಿ ದನಿಯಾಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
