ಹಿರಿಯ ರಂಗಕರ್ಮಿ ಡಾ. ಕೆ. ಮರುಳಸಿದ್ದಪ್ಪ ಹೇಳಿಕೆ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ
ಸವಾಲುಗಳನ್ನು ಎದುರಿಸುತ್ತಿದೆ ರಂಗಭೂಮಿ
#ಸುದ್ದಿ ಕಿರಣ ಸುದ್ದಿಜಾಲ
ಹೂವಿನಹಡಗಲಿ : ಸಿನಿಮಾ, ಟಿವಿ ಹಾಗೂ ಸಾಮಾಜಿಕ ಜಾಲತಾಣ ಗಳ ಮೂಲಕ ಮನರಂಜನೆ ಹೆಸರಲ್ಲಿ ಕೀಳುಮಟ್ಟದ ಅಭಿರುಚಿ ಬಿತ್ತರಿಸಲಾಗುತ್ತಿದೆ. ಯುವ ಮನಸ್ಸುಗಳನ್ನು ಮಲೀನಗೊಳಿಸುತ್ತಿರುವ ಇಂತಹ ಮಾಧ್ಯಮಗಳು ನಮ್ಮ ಮುಂದಿದ್ದು, ಅವು ರೋಗಿಷ್ಟ ಮನಸ್ಥಿತಿ ಹೊಂದಿವೆ ಎಂದು ಹಿರಿಯ ರಂಗಕರ್ಮಿ ಡಾ. ಕೆ. ಮರುಳಸಿದ್ದಪ್ಪ ಹೇಳಿದರು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ಕನ್ನಡ ರಂಗಭೂಮಿ ಸಂಕೀರ್ಣವಾದ ಸವಾಲುಗಳನ್ನು ಎದುರಿಸುತ್ತಿರುವ ಕಾಲವಾಗಿದ್ದು, ಅದು ಈಗ ಹಲವು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ನಮ್ಮ ರಂಗಭೂಮಿ ಇಳಿಮುಖವಾಗುತ್ತಿಲ್ಲ. ಅದು 70ರ ದಶಕದಲ್ಲಿ ಸಾಹಿತ್ಯ ಕೇಂದ್ರಿತವಾಗಿತ್ತು. ಪ್ರಸ್ತುತ ಸಂಗೀತ, ಸಾಹಿತ್ಯ ಎಲ್ಲವನ್ನೂ ಕೂಡಿಕೊಂಡಿದೆ. ಸಂಸ್ಕೃತ ಹಾಗೂ ಇಂಗ್ಲಿಷ್ ರಂಗಭೂಮಿಗಳು ಮಾತ್ರ ಸಾಹಿತ್ಯ ಕೇಂದ್ರಿತವಾಗಿದ್ದರೆ, ಕನ್ನಡ ಮತ್ತು ಭಾರತೀಯ ದೇಸಿ ಪರಂಪರೆಯು ಕಾವ್ಯ ಪ್ರಸಂಗವನ್ನು ರಂಗದ ಮೇಲೆ ಅಭಿನಯಿಸುವುದಾಗಿದೆ. ಅದಕ್ಕೆ ತುಂಬುತ್ತಿರುವುದು ಇಂದಿನ ಗ್ರಾಮೀಣ ರಂಗಭೂಮಿಯಾಗಿದೆ. ಕೇವಲ ಬರೆದ ನಾಟಕಗಳು ರಂಗಭೂಮಿಯಾಗುವುದಿಲ್ಲ. ಎಲ್ಲವನ್ನೂ ಒಳಗೊಂಡಿರುವುದು ನಾಟಕವಾಗುತ್ತದೆ. ಪ್ರಸ್ತುತ ಓದು-ಬರಹ ಬಲ್ಲವರ ನಾಟಕಗಳು ಜನರಿಗೆ ಕಾಣಿಸುತ್ತಿವೆ. ಆದರೆ ಜನಪದರ ನಾಟಕಗಳು ನಮ್ಮ ಮುಂದಿವೆ. ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ರಂಗಭೂಮಿ ನಿರ್ವಹಿಸಬೇಕಿದೆ ಎಂದರು. ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ರಂಗಭೂಮಿಗೆ ವೈಚಾರಿಕ ಪ್ರಜ್ಞೆ ತಂದುಕೊಟ್ಟಿದ್ದು ಕನ್ನಡ ರಂಗಭೂಮಿ, ರಾಜ್ಯದ ಗ್ರಾಮೀಣ ಭಾಗದಲ್ಲಿ ರಂಗಭೂಮಿ ಇಂದಿಗೂ ಜೀವಂತವಾಗಿದೆ. ಜನ ಸಾಮಾನ್ಯರಿಂದಲೇ ಅವುಗಳಿಗೆ ಪ್ರತಿ ವರ್ಷ 250 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚಾಗುತ್ತದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಉಳಿದಿರುವುದು ರಾಜಕಾರಣಿಗಳು ಇಲ್ಲವೇ ದೇವಸ್ಥಾನದ ಪೂಜಾರಿಗಳಿಂದಲ್ಲ; ಅದು ಗ್ರಾಮೀಣ ಕಲಾವಿದರಿಂದ. ರಾಜ್ಯದ ಪ್ರೌಢಶಾಲೆಗಳಲ್ಲಿ ರಂಗಭೂಮಿಯ ಶಿಕ್ಷಕರನ್ನು ನೇಮಿಸಬೇಕು. ಕಲಾವಿದರಿಗೆ ಮಾಸಾಶನ ಹಾಗೂ ವೈದ್ಯಕೀಯ ಸೇವೆಗಳು ದೊರಕುವಂತಾಗಬೇಕು ಎಂದರು.
ಶಾಸಕ ಕೃಷ್ಣನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭಹಿರಿಯ ಕಲಾವಿದರಾದ ಮಾಲತಿ ಮೈಸೂರು ಹಾಗೂ ಚಿಂದೋಡಿ ಚಂದ್ರಾಧರ ಅವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮವನ್ನು
ವಿಶೇಷವಾಗಿ ಉದ್ಘಾಟಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ರಂಗಭಾರತಿ ಅಧ್ಯಕ್ಷೆ 20.2. ಸುಮಾ ವಿಜಯ್. ರಿಜಿಸ್ಟ್ರಾರ್ ಬಿ. ನೀಲಮ್ಮ ಹಾಗೂ ನಾಟಕ ಅಕಾಡೆಮಿಯ ಸದಸ್ಯರು, ರಂಗಭಾರತಿಯ ಸದಸ್ಯರು ಇತರರಿದ್ದರು.
ದತ್ತಿನಿಧಿ ಪುರಸ್ಕಾರ ಪುರಸ್ಕೃತರು
ಪಿ.ಎ.ಮಂಜಪ್ಪ (ಕೊಡಗು), ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ), ಸಿ.ವಿ. ಲೋಕೇಶ (ಬೆಂಗಳೂರು ಗ್ರಾಮಾಂತರ), ಎಚ್.ಪಿ. ಈಶ್ವರಾಚಾರಿ (ಮಂಡ್ಯ), ಎ.ವೆಂಕಟೇಶ ದೊಡ್ಡಮನೆ (ಬೆಂಗಳೂರು), ಪಿ.ವಿ. ಕೃಷ್ಣಪ್ಪ (ಬೆಂಗಳೂರು), ನಾಗೇಂದ್ರ ಪ್ರಸಾದ್ (ಬೆಂಗಳೂರು) ಅವರಿಗೆ ವಿವಿಧ ದತ್ತಿ ಪುರಸ್ಕಾರ ನೀಡಲಾಯಿತು
ಗೌರವಕ್ಕೆ ಭಾಜನರಾದವರು
2025-26ನೇ ಸಾಲಿನ ಪ್ರಶಸ್ತಿ ಪುರಸ್ಕೃತರು: ರಂಗ ನಿರ್ದೇಶಕ ಮಂಗಳೂರಿನ ಬಿ. ಶಶಿಧರ ಅಡಪ ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ ನೀಡಲಾಯಿತು, ಜಿ.ಎನ್. ಮೋಹನ್ (ಬೆಂಗಳೂರು), ಟಿ. ರಘು (ಧಾರವಾಡ), ಮುರ್ತಜ ಸಾಬ ಘಟ್ಟಿಗ ನೂರು (ಬಾಗಲಕೋಟೆ) ಗೋಪಾಲ ಎಲ್ಲಪ್ಪ ಉಣಕಾಲ್ ವೈ.ಎಸ್.ಸಿದ್ದರಾಮೇಗೌಡ (ಬೆಂಗಳೂರು ದಕ್ಷಿಣ), ರೋಹಿಣಿ ರಘುನಂದನ್ (ಬೆಂಗಳೂರು), ವಿ.ಎನ್. ಅಶ್ವತ್ (ಬೆಂಗಳೂರು), ಕೆ.ಆರ್.ಪೂರ್ಣೇಂದ್ರ ಶೇಖರ್ (ಬೆಂಗಳೂರು), ಕೆ. ಮುರುಳಿ (ಕೋಲಾರ), ಮಲ್ಲೇಶ ಬಿ. ಕೋನಾಳ (ಯಾದಗಿರಿ), ಮಹೇಶ ವಿ. ಪಾಟೀಲ್ (ಬೀದರ್), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ), ಚಿಕ್ಕಪ್ಪಯ್ಯ (ತುಮಕೂರು), ಮಾಲತೇಶ ಬಡಿಗೇರ (ಗದಗ), ವೆಂಕಟಾಚಲಪ್ಪ (ಬೆಂಗಳೂರು), ಎಂ. ಚನ್ನಕೇಶವಮೂರ್ತಿ (ಬೆಂಗಳೂರು), ದೇವರಾಜ ಹಲಗೇರಿ (ಕೊಪ್ಪಳ), ಆರ್.ಟಿ. ಅರುಣಕುಮಾರ್ (ದಾವಣಗೆರೆ), ರತ್ನಾ ಸಕಲೇಶಪುರ (ಹಾಸನ), ಶಿವಯ್ಯಸ್ವಾಮಿ ಬಿಬ್ಬಳ್ಳಿ (ಕಲಬುರಗಿ), ಭೀಮನಗೌಡ ಬಿ. ಖಟಾವಿ (ಬೆಳಗಾವಿ), ಎಂ.ಎಸ್. ಮುತ್ತುರಾಜ್ (ಬೆಂಗಳೂರು), ಸುಗಂಧಿ ಉಮೇಶ ಕಲ್ಮಾಡಿ (ಉಡುಪಿ), ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ), ಎಸ್.ಆರ್. ಉದಯ್ ಸೋಸಲೆ (ಮೈಸೂರು) ಅವರಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಶಂಕರ್ ಭಟ್ (ಉತ್ತರ ಕನ್ನಡ) ಅವರಿಗೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಲಾಯಿತು.
ಕರ್ನಾಟಕ ನಾಟಕ ಅಕಾಡೆಮಿಯಿಂದ
ಹೂವಿನಹಡಗಲಿಯಲ್ಲಿ ಭಾನುವಾರ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ, ಶಾಸಕ ಕೃಷ್ಣನಾಯ್ಕ, ಹಿರಿಯ ರಂಗಕರ್ಮಿ ಡಾ. ಕೆ. ಮರುಳಸಿದ್ದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ್ ಸ್ವಾಮಿ ರಂಗಭಾರತಿ ಅಧ್ಯಕ್ಷ ಎಂ.ಪಿ.ಸುಮಾ ವಿಜಯ ರಿಜಿಸ್ಟ್ರಾರ್ ಬಿ.ನೀಲಮ್ಮ ಹಾಗೂ ಇತರರಿದ್ದರು
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
