ಮುದ್ದೇಬಿಹಾಳ: ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅನ್ಯಾಯ, ಅಕ್ರಮ, ಅತ್ಯಾಚಾರ ಹಾಗೂ ವರದಕ್ಷಿಣೆ ಕಿರುಕುಳದಂತಹ ನೋವುಗಳಿಗೆ ಸಾಂತ್ವನ ಕೇಂದ್ರಗಳು ಆಸರೆಯಾಗಿ ನಿಂತಿವೆ ಎಂದು ಮಹಿಳಾ ಸಾಂತ್ವನ ಕೇಂದ್ರದ ಮಾರ್ಗದರ್ಶಕಿ ಶ್ರೀಮತಿ ಗಂಗಾ ತೋಟದ ಅಭಿಪ್ರಾಯಪಟ್ಟರು.
ಪಟ್ಟಣದ ಶಾ|| ಸೋಗಮಲ್ ಪೀರಾಜಿ ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. 6ನೇ ಸೆಮಿಸ್ಟರ್ನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ‘ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಪಾತ್ರ’ ಎನ್ನುವ ವಿಷಯದ ಕುರಿತು ಕ್ಷೇತ್ರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ನಾಲತವಾಡದ ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘದ ಬಸವರಾಜ ಎಸ್. ನವಲಿ ಹಾಗೂ ಅವರ ಬಳಗದ ದೂರದೃಷ್ಟಿಯಿಂದ ಈ ಕೇಂದ್ರವು ಅಸ್ತಿತ್ವಕ್ಕೆ ಬಂದಿತು. ಈ ಸಂದರ್ಭದಲ್ಲಿ ಗಂಗಾ ತೋಟದ ಅವರು ಕೇಂದ್ರದ ಪ್ರಮುಖ ಉದ್ದೇಶಗಳು, ಕಾರ್ಯ ವ್ಯಾಪ್ತಿ ಮತ್ತು ಈವರೆಗಿನ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯ ನಿರ್ವಹಿಸುವಾಗ ಎದುರಾದ ಸವಾಲುಗಳು ಹಾಗೂ ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡರಲ್ಲದೆ, ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.
ಕೇಂದ್ರವು ನಿರ್ವಹಿಸುತ್ತಿರುವ ದಾಖಲೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸುತ್ತಾ, ನೊಂದ ಮಹಿಳೆಯರಿಗೆ ಕಾನೂನು ಮತ್ತು ಮಾನಸಿಕ ಧೈರ್ಯ ತುಂಬುವ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ವಿವರಿಸಿದರು. ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಸಮಾಜದ ವಾಸ್ತವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಈ ಭೇಟಿ ಸಹಕಾರಿಯಾಯಿತು.
ಈ ಕ್ಷೇತ್ರ ಭೇಟಿಯಲ್ಲಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಹಂಪಣ್ಣ ಹಾಗೂ ಉಪನ್ಯಾಸಕಿ ಶ್ರೀಮತಿ ಗೀತಾ ಅಂಕಲಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಂಪೂರ್ಣ ಮಾಹಿತಿ ಪಡೆದ ವಿದ್ಯಾರ್ಥಿಗಳು ಕೇಂದ್ರದ ಕಾರ್ಯವೈಖರಿಯನ್ನು ಶ್ಲಾಘಿಸಿ, ಗಂಗಾ ಮೇಡಂ ಅವರಿಗೆ ಧನ್ಯವಾದ ಸಮರ್ಪಿಸಿದರು. ಒಟ್ಟಾರೆಯಾಗಿ ಸಮಾಜಶಾಸ್ತ್ರ ವಿಭಾಗದ ಈ ಕ್ಷೇತ್ರ ಭೇಟಿ ಯಶಸ್ವಿಯಾಗಿ ಜರುಗಿತು.