ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಶಿಬಿರ ಸಮಾಜ ಸೇವೆಗೆ ಇರುವ ಸುವರ್ಣ ಅವಕಾಶ: ಪಲ್ಲವಿ ನಾಡಗೌಡ
ಸೇವೆಯೇ ಸಂಸ್ಕಾರ: ಮುದ್ನಾಳದಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರಕ್ಕೆ ಚಾಲನೆ.
ಮುದ್ದೇಬಿಹಾಳ: ವಿದ್ಯಾರ್ಥಿ ದೆಸೆಯಲ್ಲಿ ಎನ್.ಎಸ್.ಎಸ್ ಶಿಬಿರಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲ, ಅವು ಸಮಾಜದ ವಾಸ್ತವಿಕತೆಯನ್ನು ಅರಿಯಲು ಮತ್ತು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಲು ಇರುವ ಸುವರ್ಣ ಅವಕಾಶಗಳಾಗಿವೆ" ಎಂದು ದೇವಿಕಾ ಸುಬ್ಬರಾವ್ ಫೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ನಾಡಗೌಡ ಕರೆ ನೀಡಿದರು.
ಪಟ್ಟಣದ ಆಲಮಟ್ಟಿ ರಸ್ತೆಯ ಹಡಲಗೇರಿ ಬಳಿಯಿರುವ ಮಾದರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ ದತ್ತು ಗ್ರಾಮ ಮುದ್ನಾಳದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಸಿ.ಎಸ್.ನಾಲತವಾಡ ಅವರು ಮಾತನಾಡಿ, ವ್ಯಕ್ತಿ ಮತ್ತು ಸಮಾಜದ ನಡುವೆ ಆರೋಗ್ಯಕರ ಬಾಂಧವ್ಯವನ್ನು ಬೆಸೆಯುವುದೇ ಎನ್.ಎಸ್.ಎಸ್ ನ ಮೂಲ ಉದ್ದೇಶ. ಶಿಸ್ತು ಮತ್ತು ಶ್ರಮದಾನದ ಮೂಲಕ ವಿದ್ಯಾರ್ಥಿಗಳು ಗ್ರಾಮ ವಿಕಾಸಕ್ಕೆ ನಾಂದಿ ಹಾಡಬೇಕು ಎಂದು ನುಡಿದರು.
ಕಾಲೇಜಿನ ಪ್ರಾಚಾರ್ಯರಾದ ಎಸ್.ಎಲ್.ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಎಸ್.ರಾಮಥಾಳ, ಶಂಕರಗೌಡ ಪಾಟೀಲ್, ಎಸ್.ಎ.ಮೇರೆಖೋರ, ಅಬ್ದುಲ್ ರಜಾಕ್ ನದಾಫ್, ಎಸ್. ವಿ.ಬಸರಕೋಡ್, ಶಿವಪ್ರಕಾಶ್ ಗೂಳಿ, ನಾಗರಾಜ ದೊಡ್ಡಮನಿ ಹಾಗೂ ಕೆ.ಜಿ.ಗೆದ್ದಪ್ಪನವರ ಉಪಸ್ಥಿತರಿದ್ದರು.
ಬೋಧಕ ವರ್ಗದವರಾದ ಪ್ರೊ. ರೇವಣಸಿದ್ದಪ್ಪ ಅಮ್ಮಣ್ಣಿ, ಪ್ರೊ.ವಿನಯ್ ಗಡೆದ, ಪ್ರೊ. ಚೆನ್ನಮ್ಮ ಚೆಲುಮೂರ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ.ರವಿ ಕಟ್ಟಿಮನಿ ಅವರು ಶಿಬಿರದ ರೂಪುರೇಷೆಗಳನ್ನು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮದ ಪ್ರಮುಖರು ಹಾಗೂ ವಿದ್ಯಾರ್ಥಿ ವೃಂದದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
