ಅತ್ಯಾಪ್ತ ಗೆಳತಿ ಜಿ.ಎಸ್.ಸುಶೀಲಾದೇವಿ ಆರ್ ರಾವ್ ಬರೆದಿರುವ ಕವನ
ಅಗಲಿದ ಹಿರಿಯ ಸಾಹಿತಿ ಅರುಂಧತಿ ರಮೇಶ್ ಅವರ ಕುರಿತಾಗಿ ಅವರ ಅತ್ಯಾಪ್ತ ಗೆಳತಿ ಜಿ.ಎಸ್.ಸುಶೀಲಾದೇವಿ ಆರ್ ರಾವ್ ಬರೆದಿರುವ ಕವನ:
ಅರುಂಧತಿ ರಮೇಶ್
ಈಕೆ ಅಮಿತ ಜೀವನೋತ್ಸಾಹಿ
ಒಂದಿನಿಸೂ ಇಲ್ಲ ಮುನಿಸು
ಸದಾ ಹಸನ್ಮುಖಿ ಸ್ನೇಹಜೀವಿ
ಹಿರಿಯರಿಗೆ ತಲೆಬಾಗಿ ಕಿರಿಯರನು ಎದೆಗವಿಚಿ
ಸದಾ ಪ್ರೋತ್ಸಾಹಿಸುವ ಮಮತಾಮಯಿ
ಎತ್ತರ ನಾಲ್ಕೇ ಅಡಿ ಕಾವ್ಯದಲಿ
ಬೆಳೆದಿದ್ದೋ ಎತ್ತರೆತ್ತರಕೆ
ಕಡೆಂಗೋಡ್ಲು, ಬೇಂದ್ರೆ, ಅಡಿಗ,
ಮಹಾಲಕ್ಷ್ಮಿ, ಅತ್ತಿಮಬ್ಬೆ
ಸುಶೀಲಾ ಆರ್ ಶೆಟ್ಟಿ ಕಾವ್ಯಪ್ರಶಸ್ತಿ
ಪಡೆದಿದ್ದರೂ ಇಲ್ಲ ಅಹಂಕಾರ
ತಾಲ್ಲೂಕು ಕಸಾಪ ಅಧ್ಯಕ್ಷೆಯಾಗಿ
ಅಧಿಕಾರ ನಿಭಾಯಿಸಿದ್ದರೂ
ಅತ್ಯಂತ ವಿನಯಶೀಲೆ
ಸಾಹಿತ್ಯ ಕಾರ್ಯಕ್ರಮಗಳ
ಹೊಣೆಯ ಹೊತ್ತಾಕೆ ಅದಕಾಗಿ
ಹಗಲಿರುಳೂ ಶ್ರಮಿಸಿದಾಕೆ
ವೇದಿಕೆಯನೇರಿ ಕನ್ನಡಕದ
ಮರೆಯಲ್ಲೇ ಕಣ್ಣುಮುಚ್ಚಿ
ತೂಕಡಿಸಿದರೂ ತಟ್ಟನೆದ್ದು
ಭಾಷಣವ ಬಿಗಿದಾಕೆ
ರಾಜಧಾನಿ ಸೇರಿದರೂ ಸದಾ
ಪಂಪ ಬನವಾಸಿಗೆ ಹಂಬಲಿಸಿದಂತೆ
ಹುಟ್ಟೂರಿಗಾಗಿ ಹಂಬಲಿಸಿದಾಕೆ
ಮನಸ್ಸನ್ನೆಲ್ಲಾ ಇಲ್ಲೇ ಇಟ್ಟು ಕೊರಗಿದಾಕೆ
ಕಾವ್ಯದಾಗಸದಲ್ಲಿ ತಲೆಯೆತ್ತಿ ನೋಡಿ
ಅದೋ ಅಲ್ಲಿ ಕಾಣುತ್ತಿದೆ
ನಕ್ಷತ್ರ ಅರುಂಧತಿ.
ಜಿ.ಎಸ್.ಸುಶೀಲಾದೇವಿ ಆರ್ ರಾವ್
ದಾವಣಗೆರೆ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
