ಪರಿಸರ ನಾಶ ನಿಲ್ಲಿಸದಿದ್ದರೆ ಭವಿಷ್ಯದ ದಿನಗಳು ಅಪಾಯಕಾರಿ: ಸಾಹಿತಿ ಭೇರ್ಯ ರಾಮಕುಮಾರ್
ಭೂಮಿ ಒಂದೇ ಮನುಷ್ಯನಿಗೆ ಆಶ್ರಯ ತಾಣ. ಮನುಷ್ಯನ ಸ್ವಾರ್ಥದಿಂದಾಗಿ ಪರಿಸರ ನಾಶವಾಗಿ, ಭೂಮಿ ನಿರ್ನಾಮವಾದರೆ ಮಾನವ ಕುಲವೇ ವಿನಾಶ ಆಗುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಕೋ ಕ್ಲಬ್ ಆಶ್ರಯದಲ್ಲಿ ಪರಿಸರ ಜಾಗೃತಿ ಉಪನ್ಯಾಸ ಮಾಡುತ್ತಿದ್ದ ಅವರು ಪರಿಸರ ನಾಶದಿಂದ ಮಾನವ ಜನಾಂಗ ವಿನಾಶದತ್ತ ಸಾಗುತ್ತಿದೆ. ಈಗಲಾದರೂ ಮಾನವ ಪರಿಸರ ಉಳಿಸಲು, ಬೆಳೆಸಲು ಗಮನಹರಿಸಬೇಕಾಗಿದೆ ಎಂದು ಕಿವಿಮಾತು ನುಡಿದರು.
ಮಾನವನ ಸ್ವಾರ್ಥದಿಂದಾಗಿ ಕಾಡುಗಳು ನಿರ್ನಾಮವಾಗುತ್ತಿವೆ. ಮನೆ ಉಪಕರಣಗಳಿಗಾಗಿ, ಕೃಷಿ ಜಮೀನಿಗಾಗಿ, ಊರುವಲಿಗಾಗಿ, ಹೆದ್ದಾರಿಗಳ ನಿರ್ಮಾಣಕ್ಕಾಗಿ, ಅದ್ದೂರಿ ರೆಸಾರ್ಟ್ವ್ಳ್ ಗಳ ನಿರ್ಮಾಣಕ್ಕಾಗಿ ಪ್ರತಿ ನಿತ್ಯವೂ ಹಸಿರು ಪರಿಸರದ ನಾಶ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ಪ್ರಕೃತಿ ವಿನಾಶದಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ. ಮಾನವರಲ್ಲಿ ಹೃದಯದ ಕಾಯಿಲೆ, ಶ್ವಾಸಕೋಷದ ಕಾಯಿಲೆಗಳು ತೀವ್ರವಾಗುತ್ತಿವೆ. ಮನುಷ್ಯನ ದೇಹವು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಿದ್ದೂ ಕರೋನ, ಮೆದುಳು ಜ್ವರದಂಥಹ ಕಾಯಿಲೆಗಳಿಗೆ ಪ್ರತಿನಿತ್ಯ ಜನರು ಬಲಿಯಾಗುತ್ತಿದ್ದಾರೆ. ಪರಿಸರ ಅಸಮತೋಲನದಿಂದಾಗಿ ಅತಿವೃಷ್ಟಿ, ಅನಾವೃಸ್ಟಿಗಳು ಉಂಟಾಗುತ್ತಿವೆ. ಮಾನವ ಜೀವನ ಕಷ್ಟಕ್ಕೆ ಸಿಲುಕಿದೆ ಎಂದು ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಕಾಡಿನ ನಾಶದಿಂದಾಗಿ ಆನೆ, ಚಿರತೆ, ಹುಲಿ ಮೊದಲಾದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಆಹಾರ, ನೀರು ಅರಸಿ ಬರುತ್ತಿವೆ. ಈ ವೇಳೆ ಮನುಷ್ಯರ ಮೇಲೆ ಧಾಳಿ ನಡೆಸುತ್ತಿವೆ. ಇದರಿಂದಾಗಿ ಪ್ರತಿನಿತ್ಯವೂ ಸಾವುನೋವುಗಳು ಉಂಟಾಗುತ್ತಿವೆ ಎಂದು ರಾಮಕುಮಾರ್ ನುಡಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯವಲ್ಲ. ಇದು ಪ್ರತಿಯೊಬ್ಬ ಮಾನವಜೀವಿಯ ಕರ್ತವ್ಯ. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿಯನ್ನು ನೆಟ್ಟು ಬೆಳೆಸಬೇಕು. ತಮ್ಮೂರಿನಲ್ಲಿ ನಡೆಯುವ ಹಬ್ಬಗಳು ಹಾಗೂ ಜಾತ್ರೆಗಳ ಸಂದರ್ಭದಲ್ಲಿ ತಮ್ಮ ಮನೆಗೆ ಬರುವ ಸ್ನೇಹಿತರಿಂದ, ಬಂಧುಗಳಿಂದ ಸಸಿಗಳನ್ನು ನೆಡಿಸಬೇಕು. ಪ್ರತಿಯೊಂದು ಕುಟುಂಬವು ಪ್ರತಿವರ್ಷ ಹತ್ತು ಸಸಿಗಳನ್ನು ಕಡ್ಡಾಯವಾಗಿ ಬೆಳೆಸುವ ನಿರ್ಧಾರ ಮಾಡಬೇಕು. ಆಗ ಮಾತ್ರ ಪರಿಸರ ಉಳಿಯುತ್ತದೆ. ಮಾನವ ಪ್ರಪಂಚವನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದವರು ಕಿವಿಮಾತು ನುಡಿದರು.
ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ರೇಣುಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಕೆ. ಎಂ. ಸೌಮ್ಯ ಸ್ವಾಗತಿಸಿದರು. ಸಹಶೀಕ್ಷಕಿ ಎಸ್. ಏನ್. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು. ಎಕೋ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ಸಾಹಿತಿ ಭೇರ್ಯ ರಾಮಕುಮಾರ್ ಮಕ್ಕಳಿಗೆ ಪರಿಸರ ಸಂರಕ್ಷಣಾ ಪ್ರತಿಜ್ಞಾವಿಧಿ ಬೋಧಿಸಿದರು. ಮಕ್ಕಳಿಂದ ಪರಿಸರ ಸಂರಕ್ಷಣಾ ಘೋಷನಣೆಗಳನ್ನು ಕೂಗಿಸಿದರು. ಇದೇ ಸಂದರ್ಭದಲ್ಲಿ ಹರದನಹಳ್ಳಿ ಗ್ರಾಮಸ್ಥರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಾಹಿತಿ ಭೇರ್ಯ ರಾಮಕುಮಾರ್ ಅವರನ್ನು ಸನ್ಮಾನಿಸಲಾಯ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
