208ನೇ ಭೀಮ್ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮ
ಚನ್ನರಾಯಪಟ್ಟಣ: 208ನೇ ಭೀಮ್ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಹಾಸನದ ಪ್ರಜಾಸೌಧದ ಮುಂಭಾಗದಲ್ಲಿ ದಿನಾಂಕ:20.01.2026ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ಹಾಸನದ ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂದೇಶ ಅವರು
ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ|| ಬಾಬಾ ಸಾಹೇಬ್ ಅಂಬೇಡ್ಕರರು, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಹೇಳಿದ್ದು, ಅಂದರೆ ಇಂದಿನ ನಮ್ಮ ಸ್ಥಿತಿಗತಿಗೆ ಇತಿಹಾಸದ ಕುರುಹುಗಳಿಗೆ ಅದನ್ನು ಹುಡುಕಿರಿ ಮತ್ತು ಕಳೆದುಕೊಂಡಿದ್ದನ್ನು ಪುನರ್ ನಿರ್ಮಾಣ ಮಾಡಲು ನಿಮಗೆ ಇತಿಹಾಸದ ಅರಿವು ಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಅಂತಹ ಹುದುಗಿ ಹೋಗಿದ್ದ ನಮ್ಮ ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸದ ದಾಖಲೆಗಳಲ್ಲಿ ನಮಗೆ ಬ್ರಿಟೀಷರ ಆಡಳಿತದಲ್ಲಿ ನಮ್ಮ ಸಮುದಾಯದ ಮಹರ್ ಸೈನಿಕರು ಒಂದು ಯುದ್ಧವನ್ನು ಬ್ರಿಟೀಷರ ಪರವಾಗಿ ಗೆದ್ದು ಕೊಡುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ನಮ್ಮ ಭಾರತೀಯ ಸಮುದಾಯಕ್ಕೆ (ಪರಿಶಿಷ್ಟ ಜಾತಿ / ವರ್ಗ ಮತ್ತು ಹಿಂದುಳಿದ ಜಾತಿ ) ಬ್ರಿಟೀಷರು ಈ ಯುದ್ಧದ ಜಯದ ಕೊಡುಗೆಯಾಗಿ ಇಂಗ್ಲೀಷ್ ಶಿಕ್ಷಣವನ್ನು ಕೊಡಲು ಕಾನೂನು ರೂಪಿಸಿದರು. ಆ ಯುದ್ಧವೇ ಭೀಮಾ ಕೋರೆಂಗಾವ್ ಯುದ್ಧ ಇದನ್ನು ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಮೂರನೇ ಆಂಗ್ಲೋ ಮರಾಠ ಯುದ್ಧವೆಂದು ದಾಖಲಿಸಲಾಗಿದೆ. ಮರಾಠ ರಾಜ ಛತ್ರಪತಿ ಶಿವಾಜಿಯು ತಮ್ಮ ಸೈನ್ಯದಲ್ಲಿ ಎಲ್ಲಾ ವರ್ಗದ ಜನರಿಗೂ ಸೈನ್ಯದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದರು. ಶಿವಾಜಿಯ ಮರಣದ ನಂತರ ಬ್ರಾಹ್ಮಣ ಪೇಶ್ವಗಳ ಆಳ್ವಿಕೆಗೆ ಮರಾಠ ಸಾಮ್ರಾಜ್ಯ ಒಳಪಟ್ಟಿತು.
ಅಧಿಕಾರಕ್ಕೆ ಬಂದ ಪೇಶ್ವಗಳು ಶ್ರೇಣಿಕೃತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದರು ಇವರಿಂದಾಗಿ ಮರಾಠ ಸೈನ್ಯದಲ್ಲಿದ್ದ ಅಸ್ಪೃಶ್ಯ ಮಹಾರ್ ಸೈನಿಕರನ್ನು ಹೊರಹಾಕಲಾಯಿತು. ಮರಾಠ ಸೈನ್ಯದಿಂದ ಹೊರಗಿದ್ದ ಮಹರ್ ಸೈನಿಕರನ್ನು ಬ್ರಿಟೀಷರು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡು ಆಧುನಿಕ ಯುದ್ಧ ಕೌಶಲ್ಯಗಳನ್ನು ಕಲ್ಪಿಸುವುದರ ಜೊತೆಗೆ ಮಹಾರ್ ರೆಜಿಮೆಂಟ್ ಎಂಬ ಒಂದು ತುಕುಡಿಯನ್ನೇ ಸ್ಥಾಪಿಸಿದರು. ಈ ತುಕಡಿಯನ್ನೇ ಮರಾಠ 2ನೇ ಬಾಜಿರಾಯನ ವಿರುದ್ಧ ಯುದ್ಧ ಮಾಡಲು ಸಜ್ಜು ಗೊಳಿಸಿದಾಗ ವಿಚಲಿತಗೊಂಡ ಬ್ರಿಟೀಷ್ ಮಹಾರ್ ಸೈನಿಕರು, ಪೇಶ್ವ ಎಷ್ಟಾದರೂ ನಮ್ಮವರೇ ಬ್ರಿಟೀಷರು ಹೊರಗಿನಿಂದ ಬಂದವರು ಎಂಬ ಜಿಜ್ಞಾಸೆಗೆ ಒಳಗಾಗಿ ಪರ ವಿರೋಧ ಚರ್ಚೆ ನಡೆದು ಪೇಶ್ವಯ ಪರವಾಗಿಯೇ ಯುದ್ಧ ಮಾಡಲು ನಿರ್ಧಾರ ಕೈಗೊಂಡರು, ರಹಸ್ಯವಾಗಿ ಸಿದ್ದನಾಕನ ಮೂಲಕ ಪೇಶ್ವಯನ್ನು ಭೇಟಿ ಮಾಡಿದರು.ಆದರೆ ಸನಾತನವಾದಿಯಾದ ಪೇಶ್ವಯೂ ಸಿದ್ದನಾಕನ ಬೇಡಿಕೆಗಳನ್ನು ತಿರಸ್ಕರಿಸಿ, ಯಾರು ಈ ಮಹರ್ ರನ್ನು ಒಳಗೆ ಬಿಟ್ಟವನು ಮೊದಲು ಈತನನ್ನು ಹೊರಗೆ ಕಳುಹಿಸಿ ಎಂದು ಆಗ್ರಹಿಸಿದರು. ಸಿದ್ದನಾಕನು ನಿಂತಿದ್ದ ಸ್ಥಳವನ್ನು ಗೋಮುತ್ರದಿಂದ ಶುದ್ದೀಕರಿಸಿ ಅವರ ಭೇಟಿಯನ್ನು ಅವಮಾನಿಸಲಾಯಿತು. ಸಂಧಾನಕ್ಕಾಗಿ ಹೋಗಿದ್ದ ಸಿದ್ದನಾಕನು ನಡೆದ ಸಂಗತಿಯನ್ನು ಸಹಪಾಠಿ ಸೈನಿಕರಿಗೆ ವಿವರಿಸಿದನು ಇದರಿಂದ ಕುಪಿತಗೊಂಡ ಸೈನಿಕರು, ಬಾಜಿರಾಯನ ವಿರುದ್ಧ ಯುದ್ಧಕ್ಕೆ ಸನ್ನದ್ದರಾದರು 1817 ಡಿಸೆಂಬರ್ 31 ರಂದು ಪ್ರಾರಂಭವಾದ ಯುದ್ಧವು 1818 ಜನವರಿ 01ರಂದು ಒಂದೇ ದಿನದಲ್ಲಿ ಮುಕ್ತಾಯಗೊಂಡು ಬಾಜಿರಾಯನ ಸೈನ್ಯ ಸೋತು ಮಹಾರ್‌ರ ಮುಂದೆ ಮಂಡಿಯೂರಿ ಶರಣಾಯಿತು. ಈ ಯುದ್ಧವನ್ನು ಗೆದ್ದು ಕೊಟ್ಟ ಮಹಾರ್ ಸೈನಿಕರ ಪರಾಕ್ರಮವನ್ನು ಶಾಶ್ವತವಾಗಿ ಸ್ಮರಿಸಲು ಬ್ರಿಟನ್ ಮಹಾರಾಣಿಯು ಈ ವಿಜಯದ ಸಂಕೇತವಾಗಿ ಯುದ್ಧ ಪ್ರಾರಂಭವಾದಾಗ ಮೊದಲ ಗುಂಡು ಬಿದ್ದ ಸ್ಥಳದಲ್ಲಿಯೇ 75 ಅಡಿ ಎತ್ತರದ ವಿಜಯ ಸ್ಥಂಭವನ್ನು 1823ರಲ್ಲಿ ನಿರ್ಮಿಸಿ ಅದರ ಎರಡೂ ಬದಿಯಲ್ಲಿ ಯುದ್ಧದಲ್ಲಿ ಮಡಿದ 22 ಸೈನಿಕರ ಹೆಸರುಗಳನ್ನು ಕೆತ್ತಿಸಿದರು. ಇಂತಹ ಐತಿಹಾಸಿಕ ಯುದ್ಧದ ಸ್ಮಾರಕ ಪೂನಾದ ಭೀಮಾ ನದಿಯ ದಡದಲ್ಲಿರುವ ಕೋರೆಗಾಂವ್ ಎಂಬ ಗ್ರಾಮದಲ್ಲಿ ಅಚ್ಚಳಿಯದೆ ನಿಂತಿದೆ, ಆದರೆ ಈ ಐತಿಹಾಸಿಕ ಯುದ್ಧದ ಸ್ಮಾರಕದ ಬಗ್ಗೆ ಭಾರತದ ಯಾವುದೇ ಇತಿಹಾಸದ ಪುಸ್ತಕದಲ್ಲಿ ದಾಖಲಿಸದಿರುವುದು ದೊಡ್ಡ ದುರಂತ. ನಮಗೆ ಶಿಕ್ಷಣ ದೊರಕಲು ಈ ಐತಿಹಾಸಿಕ ಯುದ್ಧದ ವಿಜಯವೇ ಆಗಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಯುದ್ದ ನಡೆದ 208ನೇ ವರ್ಷದ ವಿಜಯೋತ್ಸವವನ್ನು ಪರಿಶಿಷ್ಟ ಸಮುದಾಯದ ಒಕ್ಕೂಟದ ಮೂಲಕ ನಡೆಸಲಾಗುತ್ತದೆ. ಎಲ್ಲಾ ಸಮುದಾಯದ ಜನರು ಜಾತ್ಯಾತೀವಾಗಿ ಮತ್ತು ಪಕ್ಷಾತೀವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಭೀಮಾ ಕೋರೆಗಾವ್ ಆಚರಣ ಸಮಿತಿಯ ಜಿಲ್ಲಾಧ್ಯಕ್ಷರಾದ ಎಚ್ ಕೆ ಸಂದೇಶ್, ಸಂವಿಧಾನ ಓದು ಅಭಿಯಾನದ ಮುಖ್ಯಸ್ಥರಾದ ರಾಜು ಗೊರೂರು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಆರ್ ಮಂಜುನಾಥ್ ಕುರುವಂಕ ಹಾಜರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
