ರಾಯರ 341ನೇ ವರ್ಧಂತಿ ಉತ್ಸವ: ಭಕ್ತಿ ಸಾಗರದಲ್ಲಿ ತೇಲಿದ ಗಾಂಧಿ ವೃತ್ತ
ಚನ್ನರಾಯಪಟ್ಟಣ: "ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ" ಎಂಬ ಉದ್ಘೋಷದೊಂದಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಂಧಿ ವೃತ್ತದಲ್ಲಿರುವ ಶ್ರೀ ರಾಯರ ರಂಗಮಂದಿರದಲ್ಲಿ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಪಾದಗಳವರ ಆಶೀರ್ವಾದದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ 341ನೇ ವರ್ಧಂತಿ ಉತ್ಸವವು ಅತ್ಯಂತ ವೈಭವದಿಂದ ಜರುಗಿತು.
ರಾಯರ ಮಹಿಮೆ ಮತ್ತು ವರ್ಧಂತಿಯ ಮಹತ್ವ:
ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಮಂತ್ರಾಲಯದ ಮಹಾಗುರು ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರ ಕಷ್ಟಗಳನ್ನು ನೀಗಿಸುವ 'ಕಲ್ಪವೃಕ್ಷ' ಮತ್ತು 'ಕಾಮಧೇನು' ಎಂದೇ ಪ್ರಸಿದ್ಧರು. ಸದಾ ಹರಿನಾಮ ಸ್ಮರಣೆಯಲ್ಲಿ ತೊಡಗಿದ್ದ ರಾಯರು, ಸಮಾಜಕ್ಕೆ ಶಾಂತಿ ಮತ್ತು ಭಕ್ತಿಯ ಮಾರ್ಗವನ್ನು ತೋರಿದವರು. ಅವರ ಜನ್ಮದಿನವಾದ (ವರ್ಧಂತಿ) ಇಂದು ಭಕ್ತರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸುವುದು ವಿಶೇಷ.
ಧಾರ್ಮಿಕ ವಿಧಿವಿಧಾನಗಳು:
ಸಮಾರಂಭದ ಅಂಗವಾಗಿ ರಾಯರ ರಂಗಮಂದಿರದಲ್ಲಿ ಗುರುಗಳಿಗೆ ವಿಶೇಷ ವೈಭವದ ಅಲಂಕಾರವನ್ನು ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ ಹಾಗೂ ಮಹಾಮಂಗಳಾರತಿಗಳು ವಿಜೃಂಭಣೆಯಿಂದ ನಡೆದವು. ಈ ಪವಿತ್ರ ದಿನದಂದು ಗುರುಗಳ ದರ್ಶನ ಪಡೆಯಲು ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು.
ಬೆಳಗ್ಗಿನಿಂದ ರಾತ್ರಿಯವರೆಗೂ ಪ್ರಸಾದ ನೀಡುತ್ತಿದ್ದಿದ್ದು ವಿಶೇಷವಾಗಿತ್ತು.
ಮಧ್ಯಾಹ್ನ 1 ಗಂಟೆಗೆ ಆರಂಭವಾದ ಅನ್ನದಾನ ಸೇವೆಯಲ್ಲಿ ಸುಮಾರು 3,000ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರಂಗಮಂದಿರದ ವತಿಯಿಂದ ಸುಸಜ್ಜಿತ ವ್ಯವಸ್ಥೆ ಮಾಡಲಾಗಿತ್ತು.
ಸಾಂಸ್ಕೃತಿಕ ಸೌರಭ
ದಿನವಿಡೀ ಭಜನೆ, ದಾಸವಾಣಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೆಳೆದವು.
ಸಂಜೆ ಸೂರ್ಯಾಸ್ತದ ನಂತರ ಚನ್ನರಾಯಪಟ್ಟಣದ ರವೀಂದ್ರ ಡೆಕೋರೇಷನ್ ಇವರ ಕೈಚಳಕದಲ್ಲಿ ಎರಡು ಕಡೆ ಇರುವ ಹೆಬ್ಬಾಗಲುಗಳನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಲಾಗಿತ್ತು. ರಾಯರ ಪ್ರತಿಮೆಯನ್ನು ಹೂವಿನ ಅಲಂಕಾರ ಹಾಗೂ ದೀಪಾಲಂಕಾರದೊಂದಿಗೆ ಪ್ರಮುಖ ಬೀದಿಗಳಲ್ಲಿ ದೀಪೋತ್ಸವದೊಂದಿಗೆ ರಾಯರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಗಳವಾದ್ಯಗಳ ಮುಮ್ಮೇಳದೊಂದಿಗೆ ನಡೆದ ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಜಯಘೋಷ ಹಾಕುತ್ತಾ ಪಾಲ್ಗೊಂಡಿದ್ದರು. ದೀಪಗಳ ಅಲಂಕಾರದಿಂದ ಇಡೀ ಪಟ್ಟಣವೇ ಆಧ್ಯಾತ್ಮಿಕ ಕಳೆಯನ್ನು ಪಡೆದುಕೊಂಡಿತ್ತು.
ಒಟ್ಟಾರೆಯಾಗಿ, ಚನ್ನರಾಯಪಟ್ಟಣದ ಭಕ್ತ ಸಮೂಹವು ಗುರುರಾಯರ 341ನೇ ವರ್ಧಂತಿಯನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಿತು.
ವಿಧಾನ ಪರಿಷತ್ತು ಸದಸ್ಯರಾದ ಡಾ. ಸೂರಜ್ ರೇವಣ್ಣ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು ಅಲಂಕಾರವನ್ನು ಅಲಂಕಾರ ಪ್ರಿಯ ವಿಷ್ಣು ರವರ ಕೈಚಳಕದಲ್ಲಿ ಶೃಂಗಾರಗೊಂಡ ರಾಯರ ರಂಗ ಮಂದಿರ. ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಹಲವಾರು ಇಲಾಖೆಗಳ ಅಧಿಕಾರಿಗಳು ಮೈಸೂರು, ಮಂಡ್ಯ, ಚಿಕ್ಕಮಂಗಳೂರು, ಹೊಸ ಜಿಲ್ಲೆಯ ಎಲ್ಲಾ ತಾಲೂಕಿನ ಭಕ್ತಾದಿಗಳು ಭಕ್ತಿಯಿಂದ ಆಗಮಿಸಿದ ಭಕ್ತರು ರಾಯರ ದರ್ಶನವನ್ನು ಮಾಡಿ ಕಣ್ಣು ತುಂಬಿಕೊಂಡರು.ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂಕೆ ಪ್ರಕಾಶ್ ಭಾರದ್ವಾಜ್,ಅನಿತಾ ಪ್ರಕಾಶ್, ಡಾ.ಸ್ವಾತಿ ಭಾರದ್ವಾಜ್, ಚಿನ್ಮಯ್ ಹೆಗಡೆ, ಯೋಗೇಶ್, ಅರುಣ್, ಪ್ರಸಾದ್ ಕಿಕ್ಕೇರಿ, ಮಾಸ್ಟರ್ ಗುರುಪ್ರಸಾದ್, ಜೀವನ, ಶೃತಿ, ರಾಣಿ, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
