ಕೆಜಿಎಫ್: ಕೆಜಿಎಫ್ ಬಿಜಿಎಮ್‌ಎಲ್ ಅನುದಾನಿತ ಆಂಗ್ಲ ಶಾಲೆಯಲ್ಲಿ 2025ರ ಮಾರ್ಚ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದ ಶಾಲೆಯ ಎಲ್ಲಾ 38 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಶೂನ್ಯ ಫಲಿತಾಂಶ ದಾಖಲಿಸಿದ್ದಾರೆ. ಇದರ ಕಾರಣವಾಗಿ ಪ್ರಭಾರಿ ಮುಖ್ಯ ಶಿಕ್ಷಕರು ಹಾಗೂ ಇತರ ಶಿಕ್ಷಕರನ್ನು ಗಂಭೀರವಾಗಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್. ಅನ್ಬರಸನ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಅವರು ಈ ಬಗ್ಗೆ ಮಾತನಾಡುತ್ತಾ, “ ಕೆಜಿಎಫ್ ಕ್ಷೇತ್ರದಲ್ಲಿ ಅತಿ ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಇದ್ದಾರೆ. ಇವರಿಗೆ ಉತ್ತಮ ಶಿಕ್ಷಣ ದೊರಕದಿದ್ದರೆ ಅನ್ಯಾಯ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಮುಂದಿನ ವ್ಯಾಸಂಗದಲ್ಲಿ ಮುಂದುವರಿಯಬೇಕು. ನಾವು ಬೇರೆ ವಿಧಾನದಿಂದ ಇದಕ್ಕೆ ನ್ಯಾಯಕ್ಕಾಗಿ ಹೋರಾಡುತ್ತೇವೆ,” ಎಂದು ಹೇಳಿದರು.
ಅವರು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ಕ್ರಮ ಜರುಗದೇ ಇದ್ದರೆ, ಮೇಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ದೊಡ್ಡಮಟ್ಟದ ಧರಣಿಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.