ಮೋಡಿ ಮಾಡಿದ ಕಲ್ಲು
ಎಲ್ಲಿಂದಲೋ
ತೂರಿ ಬಂದ ಕಲ್ಲೊಂದು
ನಮ್ಮೂರ ನಟ್ಟ ನಡುವೆ ಬೀಳಬೇಕೆ?
ಅದಕ್ಕೆ ಕಣ್ಣಿಲ್ಲ ಮೂಗಿಲ್ಲ
ಕಿವಿಯಂತೂ ಇಲ್ಲವೇ ಇಲ್ಲ!
ಆದರೂ ಈ ಜನರು ಅರಿಶಿನ-ಕುಂಕುಮ
ಹಚ್ಚಿದರು, ಹೂ ಮುಡಿಸಿದರು!
ಅದಕ್ಕೆ ಚರ್ಮವಿಲ್ಲ ದೇಹವಿಲ್ಲ
ಬಾಯಿಯಂತೂ ಇಲ್ಲವೇ ಇಲ್ಲ
ಆದರೂ ಧೂಪ ತೀರ್ಥ ಪ್ರಸಾದ
ಪಂಚ ಪಕ್ವಾನದ ನೈವೇದ್ಯದೂಟ
ಅದಕ್ಕೆ ತಲೆಯಿಲ್ಲ ಬುಡವಿಲ್ಲ
ಕೈಕಾಲುಗಳಂತೂ ಇಲ್ಲವೇ ಇಲ್ಲ
ಆದರೂ ಮುತ್ತು ರತ್ನ ರೇಶಿಮೆ ಹೊದಿಕೆ
ಬೆಳ್ಳಿ ಬಂಗಾರದ ಕಿರೀಟ
ನಮ್ಮೂರಿನ ಜನರು ಈಗ ಅದು
ಹೆಣ್ಣೊ ಗಂಡೊ ನಿರ್ಧರಿಸಲಾಗದೆ
ಅವರಿಷ್ಟದಂತೆ ವರ ಬೇಡುತ್ತಿದ್ದಾರೆ
ಕೋಟಿ ಜಪ ಮಾಡುತ್ತಿದ್ದಾರೆ
ಹರಕೆ ವ್ರತಗಳನ್ನು ನಡೆಸುತ್ತಿದ್ದಾರೆ
ಆದರೂ ನೋವು ನಷ್ಟಗಳು ನಿಲ್ಲುತ್ತಿಲ್ಲ
ಕಣ್ಣೀರು ಹರಿಯುವುದು ತಪ್ಪಲಿಲ್ಲ
ನಮ್ಮುದ್ಧಾರಕ್ಕೆ ನಮ್ಮದೇ ಶಕ್ತಿ
ಎಂಬುದನ್ನು ಇವರು ತಿಳಿಯುತ್ತಿಲ್ಲ
ಉದಂತ ಶಿವಕುಮಾರ
ಕವಿ, ಬೆಂಗಳೂರು-56
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
