ಆಲೂರ ವೆಂಕಟರಾಯರು 1880ನೇ ಜುಲೈ 12ರಂದು ಬಿಜಾಪುರದಲ್ಲಿ ಜನಿಸಿದರು. ತಂದೆ ಭೀಮರಾಯರು ಮಾಮಲೆದಾರರು, ತಾಯಿ ಭಾಗೀರಥಿಬಾಯಿ. ತಂದೆ ಸರ್ಕಾರಿ ಕೆಲಸದಲ್ಲಿ ಇದ್ದುದ್ದರಿಂದ ಆಲೂರ ವೆಂಕಟರಾಯರ ವಿದ್ಯಾಭ್ಯಾಸ ಒಂದೊಂದು ಕಾಲಕ್ಕೆ ಒಂದೊಂದು ಕಡೆ ನಡೆಯಿತು. ಆರು ವರ್ಷದ ಬಾಲಕನಾಗಿದ್ದಾಗ ಆಲೂರ ವೆಂಕಟರಾಯರು ಮೂಗಿಗೆ ಹುಣಸೆಬೀಜ ಹಾಕಿಕೊಂಡುದರ ದೆಸೆಯಿಂದ ಸರಾಗವಾಗಿ ಉಸಿರಾಡಲು ಆಗದೆ ಮಾತಾಡುವಾಗ ಕೊಂಚ ತೊಂದರೆಯೂ ಆಗುತ್ತಿತ್ತು. ಕೇವಲ 16ನೆಯ ವಯಸ್ಸಿನವರಿದ್ದಾಗಲೇ ಲಕ್ಷ್ಮೀಬಾಯಿಯೊಡನೆ ಇವರ ವಿವಾಹ ನಡೆಯಿತು. ಪುಣೆಯಲ್ಲಿ ಇವರ ಕಾಲೇಜು ವಿದ್ಯಾಭ್ಯಾಸ; 1903ರಲ್ಲಿ ಬಿ.ಎ., ಪದವಿ ಪಡೆದರು. ಆ ಹೊತ್ತಿಗೆ ಅವರ ತಾಯಿ ಮತ್ತು ಪತ್ನಿ ಇಬ್ಬರು ಮೃತರಾದರು. ಪುಣೆಯಲ್ಲಿದ್ದಾಗ ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾದ ಇವರಿಗೆ ರಾಜಕೀಯದಲ್ಲಿ ಆಸಕ್ತಿ ಮೊಳಯಿತು. ಮುಂಬೈಯಲ್ಲಿ ವ್ಯಾಸಂಗವನ್ನು ಮುಗಿಸಿದ ಮೇಲೆ 1905ರಲ್ಲಿ ಧಾರವಾಡದಲ್ಲಿ ವಕೀಲಿ ವೃತ್ತಿಯನ್ನು ಅವಲಂಬಿಸಿದರು. ಆಲೂರ ವೆಂಕಟರಾಯರಿಗೆ ಎರಡನೆಯ ಬಾರಿ ವಿವಾಹವಾಯಿತು. ಇವರ ಎರಡನೇ ಪತ್ನಿಯ ಹೆಸರೂ ಕೂಡ ಲಕ್ಷ್ಮೀಬಾಯಿ. ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವೇರಿದಾಗ ಕೆಲವು ಕಾಲ ವಕೀಲಿ ವೃತ್ತಿಯನ್ನು ಬಿಟ್ಟರು. ಅಲ್ಲದೆ ತಂದೆ ಮನೆಯನ್ನು ಬಿಟ್ಟು ಸ್ವತಂತ್ರವಾಗಿ ಸಂಸಾರ ಹೂಡಿದರು. ವಕೀಲ ವೃತ್ತಿ ಕೈಗೊಂಡು ಸ್ವಾತಂತ್ರ್ಯ ಚಳುವಳಿಯ ಬಿರುಸು ತಗ್ಗಿದ ಮೇಲೆ ಪುನಃ ತಂದೆಯ ಮನೆಗೆ ಬಂದರು. ಧರ್ಮ ವೇದಾಂತಗಳತ್ತ ಮನಸು ಹರಿಸಿ ಭಗವದ್ಗೀತೆ ಅಧ್ಯಯನ ನಡೆಸಿದರು.
ಕರ್ನಾಟಕದ ಹಿತಸಾಧನೆ ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಯ ಸಾಧನೆಗಾಗಿ ಸ್ಥಾಪಿತವಾದ "ಕರ್ನಾಟಕ ವಿದ್ಯಾವರ್ಧಕ ಸಂಘ"ದ ಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ 1905ರಲ್ಲಿ ಆಲೂರ ವೆಂಕಟರಾಯರು ಅದರ ಸೂತ್ರಧಾರರಾದರು. ಸಂಘದ ಗ್ರಂಥ ಭಂಡಾರವನ್ನು ಪುನರ್ ವ್ಯವಸ್ಥೆಗೊಳಿಸಿದರು. ಭಾಷಣಗಳನ್ನು ಏರ್ಪಡಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಮುಖ ಪತ್ರವಾದ "ವಾಗ್ಭೂಷಣ" ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ವಂಗ ವಿಭಜನೆಯಿಂದಾಗಿ ದೇಶದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದ ಕಾಲ ಅದು. ಈ ಚಳುವಳಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಐಕ್ಯವನ್ನು ಸಾಧಿಸುವ ಆಕಾಂಕ್ಷೆಯನ್ನು ಆಲೂರ ವೆಂಕಟರಾಯರಲ್ಲಿ ಮೂಡಿಸಿತು. ತಮ್ಮ ಈ ಅಭಿಪ್ರಾಯವನ್ನು ಲೇಖನಗಳ ಮೂಲಕ ಪ್ರಚುರಪಡಿಸಿದರು.
ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಗ್ರಂಥಕರ್ತರು, ಶಿಕ್ಷಕರು, ವಿದ್ಯಾಧಿಕಾರಿಗಳನ್ನು ಬರಮಾಡಿಕೊಂಡು ಸಮ್ಮೇಳನವನ್ನು ನಡೆಸುವ ಯೋಜನೆಯನ್ನು ಆಲೂರ ವೆಂಕಟರಾಯರು ರೂಪಿಸಿದರು.
ಬೆಂಗಳೂರು ಕರ್ನಾಟಕದ ಸಾಂಸ್ಕೃತಿಕ ಕೇಂದ್ರ ಆಗಬೇಕೆಂಬುದು ಅವರ ಕನಸು. ಬೆಂಗಳೂರಿನಲ್ಲಿ ಇಂಥ ಒಂದು ಸಮ್ಮೇಳನ ನಡೆಸಬೇಕೆಂಬ ಇಚ್ಛೆಯಿಂದ ಬೆಂಗಳೂರಿಗೆ ನಾಲ್ಕಾರು ಬಾರಿ ಬಂದು ಅನೇಕರನ್ನು ಭೇಟಿಯಾದರು. ಪತ್ರ ವ್ಯವಹಾರ ನಡೆಸಿದರು. 1914ರಲ್ಲಿ ಇವರ ಪ್ರಯತ್ನ ಫಲಿಸಿತು. ಅಖಿಲ ಕರ್ನಾಟಕ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ "ಕರ್ನಾಟಕ ಸಾಹಿತ್ಯ ಪರಿಷತ್ತು" ರೂಪುಗೊಂಡಿತು.
ಹಾಳು ಹಂಪೆ, ಆಲೂರ ವೆಂಕಟರಾಯರಿಗೆ ಕರ್ನಾಟಕದ ವೈಭವದ ದಿನಗಳ ಪರಿಚಯ ಮಾಡಿಕೊಟ್ಟ ಪುಣ್ಯ ಸ್ಥಳ. ಆ ಸ್ಥಳವನ್ನು ಅನೇಕ ಬಾರಿ ಸಂದರ್ಶಿಸಿ ವಿದ್ಯಾರಣ್ಯರ ಚರಿತ್ರೆಯನ್ನು ಬರೆದರು.
ಕನ್ನಡ ಸಂಸ್ಕೃತಿ ಅಧ್ಯಯನಕ್ಕೆ ನಾಡಿನ ಚರಿತ್ರೆಯ ಪೂರ್ಣ ಪರಿಚಯ ಅಗತ್ಯವೆಂದು ಮನಗಂಡು ಆಲೂರ ವೆಂಕಟರಾಯರು ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದರು. ಶಾಸನಗಳು, ಪುರಾತನ ಅವಶೇಷಗಳು, ಓಲೆಗರಿ ಗ್ರಂಥಗಳು ಮುಂತಾದವನ್ನು ಪರಿಶೀಲಿಸಲು ತಮ್ಮ ಅಧ್ಯಕ್ಷತೆಯಲ್ಲಿ 1914ರಲ್ಲಿ "ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ"ವನ್ನು ಸ್ಥಾಪಿಸಿದರು. ಉತ್ತರ ಕರ್ನಾಟಕದಲ್ಲಿದ್ದ ಶಾಸನಗಳ ಪರಿಶೀಲನೆ ನಡೆಯಲು ಏರ್ಪಾಟು ಮಾಡಿದರು.
"ಪ್ರಾಚೀನ ಕರ್ನಾಟಕ" ಪತ್ರಿಕೆಯನ್ನು ಆರಂಭಿಸಿದರು. "ಕರ್ನಾಟಕದ ಗತವೈಭವ" ಎಂಬ ಅಮೂಲ್ಯ ಗ್ರಂಥವನ್ನು ರಚಿಸಿ ಪ್ರಕಟಿಸಿದರು.
ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳಲ್ಲಿ ಆಸಕ್ತಿ ಇದ್ದಂತೆ ಆಧ್ಯಾತ್ಮಿಕ ವಿಚಾರಗಳನ್ನು ಆಲೂರ ವೆಂಕಟರಾಯರಿಗೆ ಮೊದಲಿನಿಂದಲೂ ಶ್ರದ್ಧೆ ಇತ್ತು. ಅವರು ಭಗವದ್ಗೀತೆಯನ್ನೂ ವೇದಾಂತ ವಿಚಾರಗಳನ್ನೂ ಕುರಿತು ಏಳು ಗ್ರಂಥಗಳನ್ನು ಬರೆದಿದ್ದಾರೆ. ಲೋಕಮಾನ್ಯ ತಿಲಕರ ಅಪೇಕ್ಷೆಯಂತೆ ಅವರ "ಗೀತಾ ರಹಸ್ಯ"ವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಿದರು.
ಆಲೂರರ ಇನ್ನೊಂದು ಮಹತ್ವದ ಸಾಧನೆ "ಜಯ ಕರ್ನಾಟಕ" ಮಾಸ ಪತ್ರಿಕೆಯ ಸ್ಥಾಪನೆ ಮತ್ತು ಪ್ರಕಟಣೆ. ಕರ್ನಾಟಕದ ಜನತೆಯಲ್ಲಿ ಜಾಗೃತಿಯನ್ನು ಉಂಟುಮಾಡಲು ಅವರ ಭಾಷಾಭಿಮಾನವನ್ನು, ಕೆಚ್ಚನ್ನು ಕೆರಳಿಸಲು ಈ ಪತ್ರಿಕೆಯ ಮೂಲಕ ಅವರು ದೀರ್ಘಕಾಲ ಶ್ರಮಿಸಿದರು. ಕನ್ನಡ ನಾಡು, ನುಡಿಗಳಿಗಾಗಿ ಆಲೂರ ವೆಂಕಟರಾಯರು ಸಲ್ಲಿಸಿದ ಅಪೂರ್ವ ಸೇವೆಯನ್ನು ಗಮನಿಸಿ, 1930ರಲ್ಲಿ ಮೈಸೂರಿನಲ್ಲಿ ನಡೆದ "ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆರಿಸಲಾಯಿತು" ಕನ್ನಡ ನಾಡಿನ ಏಕೀಕರಣಕ್ಕಾಗಿ ಮಾತ್ರವಲ್ಲದೆ ಭಾರತ ಸ್ವಾತಂತ್ರ್ಯ ಸಾಧನೆಗಾಗಿ ಕೂಡ ಆಲೂರ ವೆಂಕಟರಾಯರು ತಮ್ಮ ಸರ್ವಸ್ವವನ್ನು ಧಾರೆ ಎರೆದು ದುಡಿದರು. ಭಾರತ ಸ್ವತಂತ್ರವಾದುದನ್ನು ಕನ್ನಡ ನಾಡು ಒಂದಾದುದನ್ನು ತಮ್ಮ ಜೀವಿತದಲ್ಲೇ ಆಲೂರ ವೆಂಕಟರಾಯರು ಕಂಡರು. ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಈ ಹಿರಿಯ ಜೀವ 1964ನೆಯ ಫೆಬ್ರವರಿ 25ರಂದು ನಿಧನರಾದರು.
ಉದಂತ ಶಿವಕುಮಾರ
ಲೇಖಕ, ಬೆಂಗಳೂರು-56
ಮೊಬೈಲ್: 9739758558